Saturday, 26 October 2013

ಕರ್ಮ ಯೋಗ


ಅರ್ಜುನನು ಹಿಂದೆ ಶ್ರೀಕೃಷ್ಣನು ಜ್ಞಾನಿಯಾಗು, ಸ್ಥಿತಪ್ರಜ್ಞನಾಗು ಎಂದೆಲ್ಲಾ ಹೇಳಿ, ಈಗ ಯುದ್ದ ಮಾಡು ಕರ್ಮ ಮಾಡು ಅಂತ ಹೇಳಿದ್ದನ್ನು ಕೇಳಿ ಈಗ ನಾನು ಏನು ಮಾಡಬೇಕೆಂಬುದನ್ನು ನಿಶ್ಚಯಮಾಡಿ ಹೇಳು ಎಂದು ಹೇಳುತ್ತಾನೆ. ಆಗ ಶ್ರೀಕೃಷ್ಣನು ಕರ್ಮದ ಬಗ್ಗೆ ವಿಸ್ತಾರವಾಗಿ ಹೇಳುತ್ತಾನೆ.

ಶ್ರೀಕೃಷ್ಣನು ಲೋಕದಲ್ಲಿ ಎರಡು ಬಗೆಯ ಜನರು ಸಿದ್ದಿಯನ್ನು ಪಡೆಯಲು ಇಚ್ಛಿಸುತ್ತಾರೆ. ಒಂದು ಬಗೆಯವರು ಜ್ಞಾನಿಗಳು ಮತ್ತೊಂದು ಬಗೆಯವರು ಕರ್ಮಿಗಳು ಎಂದು. ಈ ಜ್ಞಾನಮಾರ್ಗ ಹಾಗೂ ಕರ್ಮ ಮಾರ್ಗ ಒಂದಕ್ಕೊಂದು ವಿರೋಧವಲ್ಲ, ಪರಸ್ಪರ ಸಹಕಾರಿಗಳು. ಮೊದಲು ಜ್ಞಾನವನ್ನು ಪಡೆಯಲು ಕರ್ಮ ಮಾಡಬೇಕಾಗುತ್ತದೆ ಅನಂತರ ಜ್ಞಾನ ಬಂದಮೇಲೆ ಮಾಡಿದ್ದೆಲ್ಲಾ ಕರ್ಮವಾಗುತ್ತದೆ ! ಇಲ್ಲಿ ಕರ್ಮ ಎಂದರೆ ನಿರ್ಲೇಪ ಕರ್ಮ ಎಂದು ಧಾರಾಳವಾಗಿ ಅರ್ಥೈಸಿಕೊಳ್ಳಬಹುದು. ಜೀವ ಜಂತುವು ಒಂದು ಕ್ಷಣ ಕೂಡ ಕರ್ಮ ಮಾಡದೇ ಇರುವುದಕ್ಕಾಗುವುದಿಲ್ಲ ನಾವು ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೂ ಪ್ರಕೃತಿಯೇ ನಮ್ಮಿಂದ ಕರ್ಮಗಳನ್ನು ಮಾಡಿಸಿಕೊಳ್ಳುತ್ತದೆ ಅಜ್ಞಾನಿಗಳು ಮಾತ್ರ ಅಹಂ ಭಾವದಿಂದ ನಾನೇ ಕರ್ಮ ಮಾಡುತ್ತಿದ್ದೀನಿ ಎಂಬ ಭ್ರಮೆಗೆ ಒಳಪಟ್ಟಿರುತ್ತಾರೆ. ಯಾರು ಬರೀ ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸಿನ ಮಟ್ಟದಲ್ಲಿ ಕಾಮ ಕ್ರೋಧಗಳಿಂದ ಮುಕ್ತರಾಗಿರುವುದಿಲ್ಲವೋ ಅಂತಹವರು ಮಿತ್ಯಾಚಾರಿಗಳು ಎಂದು ಹೇಳುತ್ತಾನೆ. ಅಂದರೆ ನನ್ನ ವ್ಯಾಕ್ಯಾನ ಏನೆಂದರೆ, ಅದು ಕೀಳುಮಟ್ಟದ್ದು ಎಂಬ ಅರ್ಥವಲ್ಲದೇ, ಅದೇ ಪರಮಾರ್ಥ ಎಂದು ಅರ್ಥೈಸಿಕೊಳ್ಳಬಾರದು ಎಂದು. ಇದು ಪರೀಕ್ಷೆಯಲ್ಲಿ 35 ಅಂಕ ತೆಗೆದುಕೊಂಡಂತೆ, ಇದು ತಪ್ಪೇನೂ ಅಲ್ಲ ಆದರೆ ಇದೇ ಪುರುಷಾರ್ಥವಲ್ಲ. ಇನ್ನೂ ಉಳಿದ 65 ಅಂಕ ಮನಸ್ಸಿಗೆ ಸಂಭಂಧ ಪಟ್ಟಿದ್ದು. ಹಾಗಾಗಿ ಕೇವಲ ಹೊರಗಿನ ಇಂದ್ರಿಯ ನಿಗ್ರಹದಿಂದ ಏನೂ ಉಪಯೋಗವಿಲ್ಲ. ಮನಸ್ಸಿನ ನಿಯಂತ್ರಣ ಮುಖ್ಯ ಎಂದು ಭಗವಂತನ ಅಭಿಪ್ರಾಯವಿರಬಹುದು ಎಂಬುದು ನನ್ನ ಅಭಿಪ್ರಾಯ !

ಇಲ್ಲಿ ಇನ್ನೊಂದು ಮುಖ್ಯವಾದ ಅಂಶ ಹೇಳುತ್ತಾನೆ. ಅದೇನೆಂದರೆ, ಯಜ್ನಾರ್ಥವಾಗಿ ಕರ್ಮ ಮಾಡಬೇಕು ಇಲ್ಲದಿದ್ದರೆ ಅಂತಹ ಕರ್ಮವೂ ಇಹ ಭಂಧನವನ್ನು ಸೃಷ್ಟಿ ಮಾಡುತ್ತದೆ. ಹಾಗಾಗಿ ನೀನು ಮುಕ್ತಸಂಘನಾಗಿ ಕರ್ಮವನ್ನು ಮಾಡು (ನಿರ್ಲೇಪ ಕರ್ಮ) ಎಂದು. ಇಲ್ಲಿ ಯಜ್ಞ ಎಂಬ ಪದವು ಈ ಅಧ್ಯಾಯದಲ್ಲಿ ಅನೇಕಬಾರಿ ಬರುತ್ತದೆ. ಯಜ್ಞ ಎಂದರೆ ಹಂಚಿಕೊಂಡು ಬಾಳುವುದು ಎಂದು ಅರ್ಥೈಸಬೇಕು. ನಮ್ಮ ಸನಾತನ ಧರ್ಮದ ಸಾರವೇ ಯಜ್ಞ, ದಾನ, ತಪಸ್ಸುಗಳು ಹಾಗಾಗಿ ನಾವು ಹಂಚಿಕೊಂಡು ಬಾಳಬೇಕು ಎಂಬುದು ಬಹಳ ಬಹಳ ಬಾರಿ ಕೇಳುತ್ತೇವೆ. ಈ ಶ್ಲೊಕದ ಉದ್ದೇಶವೂ ಅದೇ, ನಾವು ಇತರರೊಂದಿಗೆ ಹಂಚಿಕೊಂಡು ಬದುಕಬೇಕು ಎನ್ನುವುದು.

ಹೀಗೆ ಹಂಚಿಕೊಂಡು ಬದುಕುವ ಬುದ್ದಿಯೂ ದೇವರು ನಮಗೆ ಹುಟ್ಟುವಾಗಲೇ ನೀಡಿದ್ದಾನೆ ಆದರೂ ಅದು ಧೂಮದಿಂದ ಕೂಡಿದ ಬೆಂಕಿಯ ತರಹ ಎದುರಿಗೆ ಕಾಣದಾಗಿದೆ. ಅದನ್ನು ನಾವು ಕಂಡುಕೊಳ್ಳಬೇಕು. ಹೀಗೆ ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳದೇ ತಾನೊಬ್ಬನೇ ಅನುಭವಿಸುವನು ಕಳ್ಳ ಎಂದು ಭಗವಂತನು ಹೇಳುತ್ತಾನೆ. ಹೀಗೆ ಯಾರು ಹಂಚಿಕೊಂಡು ಬದುಕುತ್ತಾರೋ ಅವರು ಪಾಪಗಳಿಂದ ಮುಕ್ತರಾಗುತ್ತಾರೆ ಹಾಗೂ ಯಾರು ತಮ್ಮ ಸ್ವಾರ್ಥ ಕಾರ್ಯಗಳನ್ನು ಮಾತ್ರ ಮಾಡಿಕೊಂಡು ಇತರರೊಂದಿಗೆ ಹಂಚಿಕೊಂಡು ಹೋಗುವುದಿಲ್ಲವೋ ಅವರು ಪಾಪವನ್ನೇ ಉಣ್ಣುತ್ತಾರೆ.ಹೀಗೆ ನಾವು ಕರ್ಮಫಲದಲ್ಲಿ ಆಸಕ್ತಿ ಇಲ್ಲದೇ ಪ್ರತಿಯೊಂದು ಕಾರ್ಯವನ್ನು ಯಜ್ಞರೂಪವಾಗಿ ಮಾಡಬೇಕು ಎಂಬುದು ಭಗವಂತನ ಇಂಗಿತ.

ಹೀಗೆ ಜನಕಾದಿ ರಾಜರುಗಳು ನಿರ್ಲೇಪ ಕರ್ಮವನ್ನು ಮಾಡಿ ಜ್ಞಾನಿಗಳಾಗಿದ್ದಾರೆ ಹಾಗೂ ಹೇಗೆ ದೊಡ್ಡವರು ಆಚರಿಸಿ ತೋರಿಸಿಕೊಡುತ್ತಾರೆಯೋ ಹಾಗೆ ಉಳಿದವರು ಮಾಡುತ್ತಾರೆ ಹಾಗಾಗಿ ನೀನು ಯುದ್ದವನ್ನು ಮಾಡಬೇಕು, ನನ್ನನ್ನೇ ನೋಡು ನನಗೆ ಈ 3 ಲೋಕದಲ್ಲಿ ಮಾಡಬೇಕಾದ್ದು ಏನೂ ಇಲ್ಲ ಆದರೂ ನಾನು ಎಲ್ಲವನ್ನು ಮಾಡುತ್ತೇನೆ ಏಕೆ ? ದೊಡ್ಡವರು ಎನಿಸಿಕೊಂಡವರು ತಪ್ಪುಮಾಡಿದರೆ ಉಳಿದವರೂ ಅದೆನ್ನೆ ಮಾಡುತ್ತಾರೆ ಹಾಗಾಗಿ ನಾನು ಕರ್ಮಲೋಪ ಮಾಡಬಾರದು. ಹಾಗಾಗಿ ಜ್ಞಾನಿಗಳು ಲೋಕಸಂಗ್ರಹ ರೂಪವಾಗಿ ಕರ್ಮವನ್ನು ಮಾಡಲೇಬೇಕಾಗುತ್ತದೆ.

ಕೊನೆಗೆ ಶ್ರೀಕೃಷ್ಣನು ನನ್ನಲ್ಲಿ ನಿನ್ನ ಎಲ್ಲಾ ಕಾರ್ಯಗಳನ್ನು ಅರ್ಪಿಸಿ ನಿರ್ಮಮನಾಗಿ ಅಂಟಿಲ್ಲದೇ ಹೆದರಿಕೆ ಇಲ್ಲದೇ ಯುದ್ದಮಾಡು ಇದು ನನ್ನ ನಿಶ್ಚಯವಾದ ಮತ ಎಂದು ಹೇಳುತ್ತಾನೆ. ಹಾಗೂ ನಿನ್ನ ಸ್ವಧರ್ಮಕ್ಕೆ ಅನುಸಾರವಾಗಿ ನೀನು ಕರ್ಮವನ್ನು ಮಾಡಬೇಕು ಅದು ಬಿಟ್ಟು ಪರಧರ್ಮವನ್ನು ಮಾಡುತ್ತೇನೆ ಎಂದು ಹೋಗಬಾರದು ಎಂದು ಎಚ್ಚರ ನೀಡುತ್ತಾನೆ. ಇಲ್ಲಿ ಸ್ವಧರ್ಮ ಎಂದರೇನು ಎಂದು ತಿಳಿದುಕೊಳ್ಳೋಣ, ಡಿ.ವಿ.ಜಿ. ಯವರು ಸ್ವಧರ್ಮಕ್ಕೆ ಬಹಳ ಚೆನ್ನಾಗಿ ವ್ಯಾಕ್ಯಾನ ಮಾಡಿದ್ದಾರೆ. ಮನುಷ್ಯನಿಗೆ ಯಾವಯಾವ ಗುಣಗಳು,ಯಾವಯಾವ ಶಕ್ತಿಗಳು, ಎಂತೆಂತಹ ಒಲವುಗಳು, ಎಂತೆಂಥ ಹುಮ್ಮಸ್ಸುಗಳು ಸ್ವಾಭಾವಿಕವಾಗಿ ಬಂದಿರುತ್ತವೋ ಆ ಗುಣ ಶಕ್ತಿಗಳನ್ನೂ ಆ ಮನಃಪ್ರವಣತೆ , ಆ ಅಂತಃಪ್ರವೃತ್ತಿಯನ್ನೂ ಅವನು ಲೋಕಪ್ರಯೋಜನಕ್ಕಾಗಿ ವಿನಿಯೋಗಿಸಿವುದೆ ಸ್ವಧರ್ಮ. ಹೀಗೆ ನಾವು ನಮ್ಮ ನಮ್ಮ ಸ್ವಧರ್ಮವನ್ನು ಮಾಡಬೇಕು ಆಗ ಲೋಕ ಸಂಗ್ರಹ ಕಾರ್ಯ ಸುಲಭವಾಗುತ್ತದೆ ಎಂದು ಶ್ರೀಕೃಷ್ಣನ ಅಭಿಪ್ರಾಯ.
ಕೊನೆಗೆ ಅರ್ಜುನನು ಜನರು ಬಲವಂತವಾಗಿ ತಪ್ಪು ಮಾಡಲು ಕಾರಣಗಳೇನು ಎಂದು ಕೇಳುತ್ತಾನೆ. ಅದಕ್ಕೆ ಕೃಷ್ಣನು ರಜೋಗುಣದಿಂದ ಹುಟ್ಟಿರುವ ಈ ಕಾಮ ಕ್ರೋಧಗಳೇ ಇದಕ್ಕೆಲ್ಲಾ ಕಾರಣ ಅದು ಜ್ಞಾನಕ್ಕೆ ಮುಸುಕಿದ್ದಂತೆ, ಜ್ಞಾನಿಗಳ ನಿತ್ಯವೈರಿ ಹಾಗಾಗಿ ನೀನು ಇವುಗಳನ್ನು ಗೆಲ್ಲಬೇಕು, ಇಂದ್ರಿಯ ನಿಗ್ರಹ ಮಾಡು ಶತೃಗಳನ್ನು ಜಯಿಸು ಎಂದು ಹೇಳುತ್ತಾನೆ.

ಈಗ ನಾವು ಈ ಅಧ್ಯಾಯದ ಸಾರಾಂಶವನ್ನು ನೋಡೋಣ. ಮೊದಲಿಗೆ ನಾವು ಏನೇ ಮಾಡಬೇಕಾದರೂ ಯಜ್ಞರೂಪವಾಗಿ ಮಾಡಬೇಕು ಅಂದರೆ ನಾವು ಮಾಡುತ್ತಿರುವ ಕಾರ್ಯವು 4 ಜನರಿಗೆ ಸಹಾಯವಾಗಬೇಕು, ಹೀಗೆ ಸ್ವಧರ್ಮಕ್ಕೆ ತಕ್ಕ ಕರ್ಮವನ್ನು ನಿರ್ಲೇಪವಾಗಿ ಮಾಡಬೇಕು. ಇನ್ನೂ ಹೆಚ್ಚಿನ interesting ವಿಷಯಗಳು ನಿಮಗೇನಾದರೂ ಸಿಕ್ಕಲ್ಲಿ ದಯವಿಟ್ಟು ಹಂಚಿಕೊಳ್ಳಿ. ಯಜ್ಞಭಾಗಿಗಳಾಗಿ ! :P

Sunday, 6 October 2013

ಸಾಂಖ್ಯ ಯೋಗ - ಸ್ಥಿತ ಪ್ರಜ್ಞನ ಲಕ್ಷಣಗಳು


ಬುದ್ಧಿ ಯೋಗವನ್ನು ಉಪದೇಶಿಸಿದ ಮೇಲೆ ಅರ್ಜುನನು ಶ್ರೀಕೃಷ್ಣನನ್ನು "ಸ್ಥಿತಪ್ರಜ್ಞನ ಲಕ್ಷಣಗಳೇನು? ಅವನು ಹೆಗೆಲ್ಲಾ ನೆಡೆಡುಕೊಳ್ಳುತ್ತಾನೆ?" ಎಂದು ಕೇಳಿದನು. ಆಗ ಶ್ರೀಕೃಷ್ಣನು ಸ್ಥಿತಪ್ರಜ್ಞನ ಲಕ್ಷಣಗಳನ್ನು ಕುರಿತು ಬಹಳವಾಗಿ ವಿವರಿಸುತ್ತಾನೆ. ಅವುಗಳಲ್ಲಿ ಕೆಲವನ್ನು ನೋಡೋಣ. ನಾನು ನಿಮಗೆ ಹೇಳುವುದೆಂದರೆ ಭಗವದ್ಗೀತೆಯಲ್ಲಿ ಕನಿಷ್ಠ ಈ ಭಾಗವನ್ನಾದರೂ ಕಂಠ ಪಾಠ ಮಾಡಿದಲ್ಲಿ, ಭಗವದ್ಗೀತೆಯ ಉದ್ದೇಶದ ಒಂದು ಮುಖ್ಯಾಂಶ ನಿಮ್ಮ ಪಾಲಾಗುತ್ತದೆ.

ನಾನು ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್ ನಲ್ಲಿ ಇದ್ದಾಗ ಈ ಶ್ಲೋಕಗಳನ್ನು ಬೆಳಿಗ್ಗೆ ಪ್ರಾರ್ಥನೆ 5:30 ಗೆ ಎದ್ದು ಹೇಳಬೇಕಿತ್ತು ! ಆಗ ಇದರ ಮಹತ್ವ ಅಷ್ಟಾಗಿ ಗೊತ್ತಾಗಿರಲಿಲ್ಲ, ಆಮೇಲಾಮೇಲೆ ಇದು ತುಂಬಾ ಇಷ್ಟವಾಯಿತು. ಈಗ ನಾವು ಶ್ರೀಕೃಷ್ಣನ ಉತ್ತರಗಳನ್ನು ನೋಡೋಣ ಹಾಗೂ ಸ್ಥಿತಪ್ರಜ್ಞ ನ ಲಕ್ಷಣಗಳನ್ನು ಕುರಿತು ಚಿಂತಿಸೋಣ.

ಯಾರು ಎಲ್ಲಾ ಕಾಮಸಕ್ತಿಗಳನ್ನು ತೊಡೆದು ನನ್ನಲ್ಲಿ ತಾನಗಿರುತ್ತಾರೆಯೋ ಅವರೇ ಸ್ಥಿತ ಪ್ರಜ್ಞರು. ಅವರು ದುಃಖ ಬಂದಾಗ ಕುಗ್ಗುವುದಿಲ್ಲ, ಸುಖ ಬಂದಾಗ ಹಿಗ್ಗುವುದಿಲ್ಲ, ಭಯ-ಕ್ರೋದ ಗಳನ್ನು ಜಯಿಸಿರುತ್ತಾರೆ, ಇಂದ್ರಿಯ ನಿಗ್ರಹ ಉಳ್ಳವರಾಗಿರುತ್ತಾರೆ ಹಾಗೂ ಇಂದ್ರಿಯಗಳನ್ನು ತಮ್ಮ ವಶ ಪಡಿಸಿಕೊಂಡಿರುತ್ತಾರೆ. ಹೀಗೆ ಅವರು ಮನಸ್ಸನ್ನು ಸಂಪೂರ್ಣವಾಗಿ ಹತೋಟಿಯಲ್ಲಿ ಇಟ್ಟುಕೊಂಡವರಾಗಿರುತ್ತಾರೆ. ಯಾರು ತಮ್ಮ ತಮ್ಮ ಇಂದ್ರಿಯಗಳನ್ನು ಹೀಗೆ ಹತೋಟಿಯಲ್ಲಿ ಇಟ್ಟುಕೊಳ್ಳುವುದರಲ್ಲಿ ಸಫಲರಾಗುತ್ತಾರೆಯೋ ಅವರೆಲ್ಲರೂ ಸ್ಥಿತಪ್ರಜ್ಞರು.

ಶ್ರೀಕೃಷ್ಣನು ಕೊನೆಯಲ್ಲಿ ಯಾರು ತನ್ನ ಕಾಮನೆಗಳನ್ನು ಬಿಟ್ಟು ನಿಸ್ಪೃಹರಾಗಿ, ನಿರಹಂಕಾರದಿಂದ ಲೋಕಾಸಂಗ್ರಹಾರ್ಥಕವಾಗಿ ಕರ್ಮಗಳನ್ನು ಮಾಡುತ್ತಾರೆಯೋ ಅವರು ಮನಶಾತಿಯನ್ನು ಪಡೆಯುತ್ತಾರೆ ಎಂದು ಹೇಳುವುದರ ಮೂಲಕ ತನ್ನ ಉಪದೇಶಗಳನ್ನು ಮುಗಿಸುತ್ತಾನೆ.

ಇದರಿಂದ ತಿಳಿಯುವುದೇನೆಂದರೆ, ನಾವು ಮನಸ್ಸನ್ನು ನಿಯಂತ್ರಿಸಿ ನಮಗೆ ಬೇಕಾದ ಕರ್ಮಗಳನ್ನು ನಿರಾಹಂಕಾರದಿಂದ ಮಾಡಬೇಕು, ಹಾಗೆ ಮಾಡಿದ ಕರ್ಮದಲ್ಲಿ ನಾವು ಪ್ರತಿಫಲವನ್ನು ನಿರೀಕ್ಷಿಸಬಾರದು. ಆಗ ನಾವು ಮಾಡಿದ ಕಾರ್ಯಗಳು ಸಫಲವಾಗುತ್ತವೆ ಮತ್ತು ಮನಶಾಂತಿ ದೊರೆಯುತ್ತದೆ.

ಈ ವಿಷಯವನ್ನು ಚರ್ಚಿಸಿದ್ದು ಕಮ್ಮಿ ಆಯಿತೆಂದು ನನ್ನ ಅಭಿಪ್ರಾಯ. ಈ ವಿಷಯದ ಬಗ್ಗೆ ಹೆಚ್ಚು ತಿಳಿದವರು ತಮ್ಮ ವಿಚಾರವನ್ನು ಇಲ್ಲಿ ಹಂಚಿಕೊಳ್ಳಬಹುದು...


Saturday, 5 October 2013

ಸಾಂಖ್ಯ ಯೋಗ - ನಿರ್ಲೇಪ ಕರ್ಮ


ಭಗವದ್ಗೀತೆಯ ಮುಖ್ಯವಾದ ಉಪದೇಶಗಳಲ್ಲಿ ಇದೂ ಒಂದು. ಇದು ನನಗೆ ಬಹು ಇಷ್ಟವಾದ ಉಪದೇಶ. ಶ್ರೀಕೃಷ್ಣನು ಹಿಂದೆ ನೋಡಿದಂತೆ ಆತ್ಮದ ಬಗ್ಗೆ ಮಾತನಾಡಿ, ಆತ್ಮಕ್ಕೆ ಸಾವಿಲ್ಲ ಹಾಗಾಗಿ ನೀನು ಏನೂ ಚಿಂತಿಸಬೇಡ ಎಂದು ಅರ್ಜುನನಿಗೆ ಹೇಳಿ ನಂತರ ಯುದ್ಧ ಮಾಡು ಇಲ್ಲದಿದ್ದರೆ ನಿನ್ನನ್ನು ಶತ್ರುಗಳು ಹೇಡಿ ಎಂದು ತಿಳಿಯುತ್ತಾರೆ ಎಂದು ಹೇಳುತ್ತಾ ಯುದ್ಧ ಮಾಡಲು ಹುರಿದುಂಬಿಸಿದ. ಈಗ ಹೇಗೆ ಯುದ್ಧಮಾಡಬೇಕು ಎನ್ನುವುದನ್ನು ಹೇಳಲು ಹೊರಟಿದ್ದಾನೆ. ನೋಡೋಣ.

"ಸುಖ ದುಃಖೆ ಸಮೇ ಕೃತ್ವಾ ಲಾಭಾಲಾಭೌ ಜಾಯಾಜಯೌ | ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಯಾಸಿ||2-38||" ಅಂತ. ಹಾಗೆಂದರೆ,

ಸುಖ-ದುಃಖ, ಲಾಭ-ನಷ್ಟ, ಜಯ-ಅಪಜಯ ಇವೆರಡನ್ನೂ ಸಮನಾಗಿ ಸ್ವೀಕರಿಸುವ ಮನಸ್ಸುಳ್ಳವನಾಗಿ, ಯುದ್ಧಮಾಡಲೆಂದೇ ಯುದ್ಧ ಮಾಡು ಆಗ ನಿನಗೆ ಪಾಪ ಅಂಟಿಕೊಳ್ಳುವುದಿಲ್ಲ ಅಂತ. ಇದು ಮೇಲ್ನೋಟಕ್ಕೆ ಸುಲಭದ ಉಪದೇಶದಂತೆ ಕಂಡರೂ ಅನುಭವದ ಸ್ತರದಲ್ಲಿ ನೋಡಿದಾಗ ಬಹಳ ಕಷ್ಟ ಎಂದು ತಿಳಿಯುತ್ತದೆ.

ಈಗ ಒಂದು ಆಟ ಆಡುತ್ತೇವೆ ಆಗ ನಾವು ಅಲ್ಲಿ ಗೆಲ್ಲಲೆಂದೇ ಆಡಿದರೆ ಸೋತಾಗ ತುಂಬಾ ಬೇಸರವಾಗುತ್ತದೆ. ಅದು ಬಿಟ್ಟು Game Spirit ಇಂದ ಆಡಿದಾಗ ಸೋತಮೇಲೆ ಹೆಚ್ಚು ಬೇಸರವಿರುವುದಿಲ್ಲ. ಏಕೆಂದರೆ ನಾವು ಗೆಲುವನ್ನು ನೀರೀಕ್ಷಿಸಿರುವುದಿಲ್ಲ. ಬದಲಾಗಿ ಚೆನ್ನಾಗಿ ಆಡುವ ಮನೋಭಾವ ಇಟ್ಟುಕೊಂಡಿರುತ್ತೇವೆ. ಆಗ ನಮ್ಮ ಎದುರು ಪಕ್ಷದವನು ಚೆನ್ನಾಗಿ ಆಡಿದಾಗ ಚಪ್ಪಾಳೆ ತಟ್ಟುತ್ತೇವೆಯೇ ಹೊರತು ಮತ್ಸರ ಪಡುವುದಿಲ್ಲ! ಇದು ಶ್ರೀಕೃಷ್ಣನು ನಮಗೆ ಹೇಳ ಹೊರಟಿರುವ ಸಂದೇಶ. ನಾವು ಬರೀ ಆಡುವಾಗ ಮಾತ್ರವಲ್ಲದೇ ಪ್ರತಿಯೊಂದು ಕೆಲಸ ಮಾಡುವಾಗ ಕೂಡ, ಕೆಲಸ ಮಾಡುವ ನಿಷ್ಠೆಯಿಂದ ಕೆಲಸ ಮಾಡಬೇಕೆ ಹೊರತು ಅದರ ಫಲಾಪೇಕ್ಷೆಯಿಂದಲ್ಲ. ಇದನ್ನು ಇನ್ನೊಂದು ಸುಪ್ರಸಿದ್ದ ಶ್ಲೊಕದ ಮೂಲಕ ನಮಗೆ ಹೇಳಿದ್ದಾನೆ. ಅದುವೇ,

"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕಾದಾಚನ | ಮಾ ಕರ್ಮಫಲಹೆತುರ್ಭೂರ್ಮಾ ತೇ ಸಂಗೊಸ್ತು ಅಕರ್ಮಣಿ ||2-47||
ಯೋಗಸ್ತಃ ಕುರು ಕರ್ಮಾಣಿ ಸಂಗಂ ತ್ಯಾಕ್ತ್ವಾ ಧನಂಜಯ |ಸಿಧ್ಯಸಿಧ್ಯೋ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ||2-48 ||"
ಅಂತ. ಹಾಗೆಂದರೆ,

ಮಾಡುವ ಕರ್ಮದಲ್ಲಿ(ಕೆಲಸದಲ್ಲಿ) ನಿನಗೆ ಅಧಿಕಾರ ಇದೆಯೇ ಹೊರತಾಗಿ ಅದರ ಫಲಾಫೇಕ್ಷೆಯಲ್ಲಿ ಅಲ್ಲ. ನಿನಗೆ ಬಂದ ಕರ್ಮಫಲದ ಕಾರಣ ನೀನೆಂದು ನೀನು ತಿಳಿಯಬೇಡ ಮತ್ತು ನಿನಗೆ ಕರ್ಮಫಲಾಧಿಕಾರ ಇಲ್ಲ ಎಂದ ಮಾತ್ರಕ್ಕೆ ಕರ್ಮವನ್ನೇ ತಿರಸ್ಕರಿಸುವ (ಕರ್ಮ ಮಾಡದೇ ಇರುವ) ಅಧಿಕಾರವೂ ಇಲ್ಲ ! ಅಂದರೆ ನೀನು ಕರ್ಮವನ್ನು ತ್ಯಜಿಸುವಂತಿಲ್ಲ, ಕರ್ಮಮಾಡಲೇ ಬೇಕು ಆದರೆ ಅದರ ಫಲಕ್ಕೆ ನೀನು ಕಾರಣ ಅಲ್ಲ ಎಂಬುದನ್ನು ಅರಿತಿರಬೇಕು. 

ಅಲ್ಲ ಸ್ವಾಮಿ, ಕರ್ಮ ಫಲವನ್ನು ಬಯಸದೇ ಕರ್ಮ ಮಾಡಲು ಎಲ್ಲಿಂದ ಉತ್ತೇಜನ ಬರಬೇಕು ?! ಅದಕ್ಕೇ ಕೃಷ್ಣನು ನೀನು ಯೋಗದಿಂದ ಕರ್ಮ ಮಾಡಬೇಕು ಎಂದು ಹೇಳುತ್ತಾನೆ. ಯೋಗದಿಂದ ಎಂದರೆ ಯಾವುದೇ ರಾಗ ದ್ವೇಷಗಳಿಂದ ಪ್ರೇರೇಪಿತವಾಗದೇ ಕೇವಲ ಕರ್ಮ ಮಾಡುವ ಉದ್ದೇಶದಿಂದ ಮಾಡಬೇಕು. ಗೆಲುವು ಸೋಲು ಗಳನ್ನು ಸಮಾನ ಮನೋಭಾವದಿಂದ ನೋಡುವಂತಹ ಸಮಚಿತ್ತ ಮನೊಬುದ್ದಿಗಳು ಇರಬೇಕು.

ಇದರ ಬಗ್ಗೆ ಸ್ವಲ್ಪ ತರ್ಕ ಮಾಡೋಣ. ನಾವು ಬೇರೆ ಗತಿ ಇಲ್ಲದೇ ಎಲ್ಲಾ ಕರ್ಮಗಳನ್ನು ಮಾಡಲೇ ಬೇಕು. ಅವನ್ನು ತಪ್ಪಿಸಿಕೊಳ್ಳುವಂತಿಲ್ಲ. ಆದರೆ ಅವುಗಳನ್ನು ನಾವು ಅಂಟಿಸಿಕೊಳ್ಳಬಾರದು. ಹೇಗೆಂದರೆ ಕಮಲ ಪತ್ರವು ನೀರಿನಲ್ಲೇ ಇದ್ದರೂ ಅದು ನೀರಿಗೆ ಹೇಗೆ ಅಂಟಿಕೊಂಡಿರುವುದಿಲ್ಲವೋ ಹಾಗೆ ನಾವು ಕೂಡ ಈ ಸಮಾಜ/ಸಂಸಾರ ದಲ್ಲಿ ಇದ್ದುಕೊಂಡು ಅದಕ್ಕೆ ಅಂಟಿಕೊಳ್ಳದೇ ಇರುವ Technique ಅನ್ನು ಕಲಿಯಬೇಕು. ಆಗ ನಮಗೆ ಯಾವುದರ ಮೇಲೆಯೂ ವ್ಯಾಮೋಹ ಇರುವುದಿಲ್ಲ. ನಾವು ಮಾಡುವ ಕೆಲಸಗಳೆಲ್ಲಾ ಲೋಕ ಸಂಗ್ರಹ ರೂಪದಿಂದ ಮಾಡಬೇಕು. ಆಗ ನಾನು ಈ ಕೆಲಸಗಳನ್ನು ಮಾಡುತ್ತಿರುವೆ ಎನ್ನುವ ಅಹಂಕಾರ ಇರುವುದಿಲ್ಲ. ಅಹಂಕಾರ ವಿಮೋಚನೆಗೆ ಇದು ಒಂದು ಒಳ್ಳೆಯ ಮಾರ್ಗ.

ಇದು ಹೇಳಿದಷ್ಟು ಸುಲಭದ ಕೆಲಸವಲ್ಲ. ಅನುಭವದಿಂದ ಸಾಧಿಸಬೇಕಾದರೆ ತುಂಬಾ ಸಾಧನೆ ಮಾಡಬೇಕು ಬೇಕು. ಆದರೂ ಹೀಗೆ ನಿರ್ಲೇಪ ಕರ್ಮ ಮಾಡುವುದರಿಂದ ನಾವು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಬಹುದು. ಹೀಗೆ ನಿರ್ಲೇಪ ಕರ್ಮ ಮಾಡುವವನು ಸ್ಥಿತಪ್ರಜ್ಞ ನಾಗಿರಬೇಕು. ಅಥವಾ ಸ್ಥಿತಪ್ರಜ್ಞಾನಾದವನು ನಿರ್ಲೇಪ ಕರ್ಮ ಮಾಡುತ್ತಾನೆ. ಸ್ಥಿತಪ್ರಜ್ಞ ನ ಲಕ್ಷಣಗಳೇನು ?? ಇದನ್ನು ಮುಂದೆ ನೋಡೋಣ.

Thursday, 3 October 2013

ಸಾಂಖ್ಯ ಯೋಗ - ಯುದ್ಧ ಮಾಡು !!

ಆತ್ಮದ ಸ್ವರೂಪದ ಬಗ್ಗೆ ಚಿಂತನೆ ನೆಡೆಸಿದ ನಂತರ ಶ್ರೀಕೃಷ್ಣನು ಅಭಿಮಾನ ಕೆರಳಿಸುವ ಕೆಲವು ಮಾತುಗಳನ್ನು ಆಡುತ್ತಾನೆ. ಕ್ಷತ್ರಿಯರಿಗೆ ಯುದ್ಧ ಮಾಡುವುದೇ ಧರ್ಮ ಹಾಗಾಗಿ ನೀನು ಯುದ್ಧ ಮಾಡಲೇಬೇಕು. ಒಂದು ವೇಳೆ ನೀನು ಯುದ್ಧರಂಗದಿಂದ ಓಡಿ ಹೋದರೆ ಶತ್ರುಗಳು ನಿನ್ನನ್ನು ಹೇಡಿ ಎಂದು ಭಾವಿಸುವರು. ಅದು ನಿನಗೆ ಅಕೀರ್ತಿಯನ್ನು ಉಂಟುಮಾಡುತ್ತದೆ. ಸಂಭಾವಿತರಿಗೆ ಅಕೀರ್ತಿಯು ಮರಣಕ್ಕಿಂತ ಭೀಕಾರವಾದದ್ದು ಎಂದು ಹೇಳಿ. ನೋಡು ಗೆದ್ದರೆ ರಾಜ್ಯ ಸಿಗುತ್ತದೆ ಸತ್ತರೆ ಸ್ವರ್ಗ ಸಿಗುತ್ತದೆ ಇಂತಹ ಒಳ್ಳೆಯ ಅವಕಾಶ ಮತ್ತೆ ಸಿಗುವುದಿಲ್ಲ ಯುದ್ಧ ಮಾಡು ಎಂದು ಹುರಿದುಂಬಿಸುತ್ತಾನೆ.

ಈಗ ನಾವು ಇದನ್ನು ಸ್ವಲ್ಪ ವಿಚಾರ ಮಾಡೋಣ. ಮೊದಲು ಶ್ರೀಕೃಷ್ಣ ಆತ್ಮದ ಸ್ವರೂಪ ತಿಳಿಸಿ ಯುದ್ಧದಿಂದ ಯಾರೂ ಸಾವನ್ನಪ್ಪುವುದಿಲ್ಲ, ಸಾವು ಅನ್ನುವುದು ವಸ್ತುತಃ ಇಲ್ಲವೇ ಇಲ್ಲ. ಎಂದು ತಿಳಿಯಪಡಿಸಿ ಈಗ ಮಾಡಬೇಕಾದ ಕಾರ್ಯದ ಬಗ್ಗೆ ಗಮನಹರಿಸುತ್ತಿದ್ದಾನೆ. ಇಲ್ಲಿ ನಾವು ಶ್ರೀಕೃಷ್ಣನ ಕ್ರಮ ಕ್ರಮವಾದ ಉಪದೇಶವನ್ನು ನೋಡಬಹುದು. ಮೊದಲು ನಾವು ಸಮಸ್ಯೆಯ ಮೂಲವನ್ನು ಹುಡುಕಬೇಕು. ಆ ನಂತರ ಅದನ್ನು ಬಗೆಹರಿಸಲು ಪ್ರಯತ್ನಪಡುವುದಕ್ಕೆ ಮನಸ್ಸು ಮಾಡಬೇಕು ನಂತರ ಅದನ್ನು ಕಾರ್ಯರೂಪದಲ್ಲಿ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು.

ಮೊದಲ ಕೆಲವು ಶ್ಲೋಕಗಳಲ್ಲಿ ಮೂಲ ಸಮಸ್ಯೆಯನ್ನು ನೋಡಿ ಅದನ್ನು ಬಗೆಹರಿಸಿದ್ದಾಯಿತು. ಈಗ ಯುದ್ಧಮಾಡು ಎಂದು ನಿಶ್ಚಯವಾಗಿ ಹೇಳುತ್ತಿದ್ದಾನೆ. ಇಲ್ಲಿ ಒಂದು ಶ್ಲೋಕವನ್ನು ಗಮನಿಸೋಣ.
ಹತೋ ವಾ ಪ್ರಾಪ್ಯಾಸಿ ಸ್ವರ್ಗಮ್ ಜೀತ್ವಾ ವಾ ಭೋಕ್ಷಸೇ ಮಹೀಮ್| ತಾಸ್ಮಾದುತ್ತಿಷ್ಠ ಕೌಂತೆಯ ಯುದ್ಧಾಯ ಕೃತನಿಶ್ಚಯಃ ||2-37||

ಇಲ್ಲೊಂದು ಗಮನಿಸಬೇಕಾದ ಅಂಶ ಏನೆಂದರೆ ನಾವು ಎಂತಹ ಸಂಧರ್ಭದಲ್ಲೂ ಸಹ ನಮ್ಮ ಬುದ್ದಿಯನ್ನು ಹಾಳುಮಾಡಿಕೊಳ್ಳಬಾರದು. ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಹಾಗಾಗಿ ಯುದ್ಧ ಮಾಡು ಅನ್ನುವಾಗ ಹೌದಲ್ಲ ಉಭಯತಃ ನಮಗೆ ಲಾಭವೇ ಎಂದು ಮನಸ್ಸಿಗೆ ಬರುತ್ತದೆ. ನಾವು ಕೂಡ ಹಾಗೆಯೇ ಯೋಚಿಸಬೇಕು.

ಈಗ ಯುದ್ಧ ಮಾಡುವುದು ಎಂದು ನಿಶ್ಚಯಿಸಿದ ಮೇಲೆ ಹೇಗೆ ಯುದ್ಧ ಮಾಡಬೇಕು ಎಂದು ಶ್ರೀಕೃಷ್ಣ ಹೇಳುತ್ತಾನೆ ಅದನ್ನು ಆಮೇಲೆ ನೋಡೋಣ....


Wednesday, 2 October 2013

ಸಾಂಖ್ಯ ಯೋಗ - ಆತ್ಮ ಸ್ವರೂಪ


ಅರ್ಜುನನ ಗೋಳಾಟ ಕೇಳಿ ಶ್ರೀ ಕೃಷ್ಣನು ಸಾಕು ಮಾರಾಯ ಏನು ಚಿಕ್ಕ ಮಕ್ಕಳ ತರ ಅಳುತ್ತೀಯ, ಈ ದೌರ್ಬಲ್ಯ ಬಿಟ್ಟು ಎದ್ದೇಳು ಯುದ್ಧ ಮಾಡು ಅಂದಾಗ ಅರ್ಜುನ ಅವನ ನಿಜವಾದ ಕಾರಣ ಕೊಡ್ತಾನೆ. ಮೊದಲನೇ ಅಧ್ಯಾಯದಲ್ಲಿ ಸುಮ್ನೇ ಯುದ್ದ ಆದ್ರೆ ಎಲ್ಲರೂ ಸತ್ತೋಗ್ತಾರೆ, ವರ್ಣ ಸಂಕರ ಆಗುತ್ತೆ, ಕುಲ ಸ್ತ್ರೀಯರು ಹಾಳಾಗ್ತಾರೆ, ಇನ್ನೊಂದ್ ಆಗುತ್ತೆ ಮತ್ತೊಂದ್ ಆಗುತ್ತೆ ಅಂತ ಹೇಳಿದ್ದೆಲ್ಲಾ, ಯುದ್ದ ಮಾಡೋಕೆ ಇಷ್ಟ ಇಲ್ಲ ಕಣೋ, ಬೇಡ ಪ್ಲೀಸ್ ಅಂತ ಹೇಳೋಕೆ ಮಾಡಿದ ಗಿಮಿಕ್ ! ಅದಕ್ಕೇ ಕೃಷ್ಣ  ಪ್ರಶ್ನೆಗಳ ಸರಮಾಲೆಗಳಿಗೆ ಉತ್ತರ ಹೇಳಿಲ್ಲ ! ಏನಿದು ಇಲ್ಲ ಸಲ್ಲದ ವಾದ ಮಾಡ್ತೀಯಾ ಸುಮ್ನೇ ಯುದ್ಧ ಮಾಡು ಅಂತ ಹೇಳಿದ್ದಕ್ಕೆ, ಈಗ ಅವನಿಗೆ ಮನಸ್ಸಲ್ಲಿ ಕಾಣುತ್ತಿದ್ದ ಆ ಭಯ ಏನು ಅಂತ ಹೇಳ್ತಾನೆ.

"ಪೂಜಾರ್ಹರಾದ ದ್ರೋಣ, ಭೀಷ್ಮ ಇವರನ್ನೆಲ್ಲಾ ಹೇಗೆ ಬಾಣ ಬಿಟ್ಟು ಸಾಯಿಸಲಿ? ಇವರನ್ನೆಲ್ಲಾ ಸಾಯಿಸಿ ನಾವು ಪಡೆದ ಸಂಪತ್ತಿಗೆ ಏನು ಬೆಲೆ? ಹೀಗೆ ಮಾಡಿದರೆ ನಾವು ಮಾಡುವ ಊಟಕ್ಕೆ ರಕ್ತ ಮೆತ್ತಿಕೊಂಡಿರುವುದಿಲ್ಲವೇ? ಅದೂ ಅಲ್ಲದೇ ಯುದ್ಧ ಮಾಡಿ ಗೆದ್ದೇ ಗೆಲ್ಲುತ್ತೇವೆ ಅಂತ ಏನು ಹೇಳೋಕಾಗಲ್ಲ, ಅಯ್ಯೋ ಸಿಕ್ಕಾಪಟ್ಟೆ Confusion ಆಗ್ತಿದೆ ಮಾರಾಯ ನೀನೆ ಏನಾದ್ರೂ ಒಂದು Solution ಕೊಡು, ನೀನು ಹೇಳಿದ್ದನ್ನ ಮಾಡ್ತೀನಿ, ನಿನ್ನ ಶಿಷ್ಯ ನಾನು, ನಾನು ಈಗ ಏನು ಮಾಡಿದ್ರೆ ನನಗೆ ಶ್ರೇಯಸ್ಸು ಉಂಟಾಗುತ್ತೋ ಅದನ್ನು ನಿಶ್ಚಯವಾಗಿ ಹೇಳು" ಅಂತ ಹೇಳಿ ನಾನು ಯುದ್ದ ಮಾಡಲ್ಲ ಅಂತ ಕೂತ್ಕೊಂಡ್ ಬಿಡ್ತಾನೆ !

ಇಲ್ಲೊಂದು ತಮಾಷೆ ಏನಂದ್ರೆ, ನನ್ನ ಬುದ್ದಿಗೆ ಏನೂ ಗೊತ್ತಾಗ್ತಿಲ್ಲ ನೀನೇ ಹೇಳು ಅಂದಮೇಲೆ, ಆದ್ರೂ ನಾನು ಯುದ್ಧ ಮಾಲ್ಲ ಅಂತ ಅವನು ನಿರ್ಧಾರ ಮಾಡಿಬಿಟ್ಟಿದ್ದಾನೆ ! ಇದು ನಮ್ಮ ವಿಚಾರದಲ್ಲೂ ಅಷ್ಟೇ, ನಾವು ಇನ್ನೊಬ್ಬರ ಹತ್ತಿರ ಏನಾದ್ರೂ ಹೇಳಿ ಮಾರಾಯ್ರೆ ಏನು ಮಾಡಬೇಕು ಅಂತಾನೆ ಗೊತ್ತಾಗ್ತಿಲ್ಲ ಅಂತ ಹೇಳ್ತಿರ್ತೀವಿ ಆದ್ರೂ ನಮ್ಮ ಮನಸ್ಸಲ್ಲಿ ಒಂದು Plan ಇರುತ್ತೆ ಏನು ಮಾಡ್ಬೇಕು ಅಂತ. ಸಮಸ್ಯೆ ಏನು ಅಂದ್ರೆ ನಮ್ಮ ವಿಚಾರ ಸರಿಯಾಗಿಲ್ಲದಿದ್ದ ಪಕ್ಷದಲ್ಲಿ, ಅದು ಯಾಕೆ ಸರಿಯಾಗಿಲ್ಲ ಅಂತ ತಿಳಿಸೋರು ಮಾತ್ರ ತುಂಬಾ ಕಷ್ಟ ಪಟ್ಟು ನಮ್ಮನ್ನ ತಿದ್ದಬೇಕು. ಅದ್ರಲ್ಲೂ ನಾವು ಮಹಾ ಬುದ್ದಿವಂತರು ಅನ್ನೋ ಭ್ರಮೆಗೆ ಒಳಗಾಗಿದ್ರಂತೂ ಮುಗೀತು ಇನ್ನೂ ಕಷ್ಟ. ಶ್ರೀಕೃಷ್ಣನಿಗೆ ಅಲ್ಲಿ ಆಗಿದ್ದೂ ಇದೇ !

ಆದರೆ ಕೃಷ್ಣ ಮಹಾ ಜ್ಞಾನಿ ಹಾಗಾಗಿ ಅವನಿಗೆ ಇದೇನು ಕಷ್ಟವಾಗಲಿಲ್ಲ. ಅವನಿಗೆ ಇವನ ಮೂಲಭೂತ ಸಮಸ್ಯೆ ತಕ್ಷಣ ಗೊತ್ತಾಯ್ತು. ಅದ್ಕೆ ಹೇಳ್ತಾನೆ, "ಯಾಕಪ್ಪಾ ಸುಮ್ನೇ ಅಳ್ತೀಯ, ಎಲ್ಲಾ ಗೊತ್ತಿರೋರ್ ತರ ಮಾತಾಡ್ತೀಯ, ಇರೋರಿಗೆ ಸಾಯೋರಿಗೆ ಬುದ್ದಿವಂತರು ಅಳೊದಿಲ್ಲ" ಈಗೇನು? ಆವ್ರು ಸಾಯ್ತರೆ ಅಂತ ತಾನೇ, ನಾನು ಇರ್ಲಿಲ್ಲ ಅನ್ನೋದೇ ಇರ್ಲಿಲ್ಲ, ನೀನೂ ಇರ್ಲಿಲ್ಲ ಅನ್ನೋದೂ ಇರ್ಲಿಲ್ಲ, ಇಲ್ಲಿರೋರು ಎಲ್ಲರೂ ಅಷ್ಟೇ ಇರ್ಲಿಲ್ಲ ಅನ್ನೋ ಕಾಲವೇ ಇರ್ಲಿಲ್ಲ. ಅಂತ ಹೇಳಿ ದೇಹ-ದೇಹೀ ಸಂಬಂಧದ ಬಗ್ಗೆ ಹೇಳ್ತಾನೆ. ಶರೀರ ಹೇಗೂ ಹಾಳಾಗೋದೇ ಹೌದು, ಆತ್ಮ ಅನ್ನೋದು ಹೇಗೂ ಹಾಳಾಗೋದೇ ಇಲ್ಲ. ಆತ್ಮಕ್ಕೆ ಶರೀರ ಒಂದು ಬಟ್ಟೆ ಅಷ್ಟೇ, ನಾವು ಹೇಗೆ ಬಟ್ಟೆ ಹಾಳಾದ್ಮೆಲೆ ಬಿಸಾಕ್ತೀವೋ ಹೊಸ ಬಟ್ಟೆ ಹಾಕೊಳ್ತೀವೋ ಆತ್ಮಕ್ಕೂ ಅಷ್ಟೇ ಈ ದೇಹ ಹೋದ್ರೆ ಇನ್ನೊಂದ್ ದೇಹ ಸಿಗತ್ತೆ! ಹಾಗಾಗಿ ಈ ಆತ್ಮವು ಅವಿನಾಶಿ ಅನ್ನೋದು ಮೊದಲು ತಿಳ್ಕೋ ಅಂತ ಹೇಳ್ತಾನೆ. ಆಮೇಲೆ ಅದನ್ನೇ ಮತ್ತೆ ಬೇರೆ ಬೇರೆ ತರ ಸುಮಾರ್ ಸರ್ತಿ ಹೇಳ್ತಾನೆ...

Time To Analyze.. ಯಾಕೆ ಕೃಷ್ಣ ಯುದ್ಧ ಮಾಡು ಅಂತ ನೇರವಾಗಿ ಹೇಳದೇ ಆತ್ಮ ಅವಿನಾಶಿ ಅನ್ನೋದನ್ನ ಒತ್ತುಕೊಟ್ಟು ಹೇಳ್ದ?
ಜೀವನದಲ್ಲಿ ಮುಖ್ಯವಾದ ಶತ್ರು ಅಂದ್ರೆ ಭಯ. ದುಃಖವೂ ಕೂಡ ಭಯದ ಅಪರ ಸ್ವರೂಪ. ಈ ಭಯಗಳಲ್ಲೆಲ್ಲಾ ಮುಖ್ಯವಾದ ಭಯ ಅಂದ್ರೆ ಜೀವಭಯ. ಹೇಗೆ ಅಂದ್ರೆ ನಮಗೆ ಯಾಕೆ ಭಯ ಉಂಟಾಗುತ್ತೆ ಅನ್ನೋದು ನೋಡಿದ್ರೆ ಅದು ಸ್ಪಷ್ಟವಾಗಿ ಗೊತ್ತಾಗುತ್ತೆ. ಭಯ ಉಂಟಾಗಲು ಮೂಲ ಕಾರಣ ನಾವು ಪ್ರೀತಿಸುವ ವಸ್ತು/ವ್ಯಕ್ತಿ ನಮ್ಮಿಂದ ದೂರ ಆಗ್ತಾರೆ ಅಂತ. ನೀವೇ ಸ್ವಲ್ಪ ಯೋಚನೆ ಮಾಡಿ, ನಾನು ಪ್ರೀತಿಸಿದ ಹುಡುಗಿಗೆ Propose ಮಾಡೋಕೆ ನನಗೆ ಭಯ ! ಯಾಕೆ? ಎಲ್ಲಿ ಅವಳು ನನ್ನಿಂದ ದೂರ ಆಗ್ತಾಳೋ ಅಂತ. Manager ಕಂಡ್ರೆ ಭಯ ಎಲ್ಲಿ ನನ್ನ ಕೆಲಸ ಹೋಗುತ್ತೋ, Increment ಹಾಳು ಮಾಡಿ ಹಾಕ್ತಾರೋ ಅಂತ ! ಹೀಗೆ ಪ್ರತಿಯೊಂದು ಭಯದ ಹಿಂದೆ ನಾವು ಪ್ರೀತಿಸಿರುವ ವಸ್ತುವನ್ನು ಆಗಲುತ್ತೇವೆ ಎಂಬ ಭಾವ ಇರುತ್ತದೆ.

ಸರಿ, ನಾವು ಅತ್ಯಂತ ಪ್ರೀತಿ ಮಾಡುವುದು ಯಾರನ್ನ? ನಮ್ಮನ್ನೇ !!! ಉಪನಿಷತ್ತಿನಲ್ಲಿ ಒಂದು ಮಾತಿದೆ, "ನವಾ ರೇ ಜಾಯ ಪ್ರಿಯಂ ಭವತಿ, ಆತ್ಮನಸ್ತು ಕಾಮಯ ಜಾಯ ಪ್ರಿಯಂ ಭವತಿ ! ನವಾ ರೇ ಪುತ್ರಾಃ ಪ್ರಿಯಂ ಭವತಿ ಆತ್ಮನಸ್ತು ಕಾಮಯ ಪುತ್ರಾ ಪ್ರಿಯಂ ಭವತಿ ! ... " ಹೀಗೆ ಸಾಗುತ್ತದೆ ಅಂದರೆ ನನಗೆ ಹೆಂಡತಿ ಇಷ್ಟ, ಯಾಕೆ ? ಅವಳು ನನ್ನ ಹೆಂಡತಿ ಅದಕ್ಕೆ, ಮಕ್ಕಳು ಇಷ್ಟ ಯಾಕೆ ನನ್ನ ಮಕ್ಕಳು ಅದಕ್ಕೆ. ಅಂದರೆ ನನಗೆ ಎಲ್ಲರೂ ಪ್ರಿಯರೇ ಆದರೆ ಅವರೆಲ್ಲ ನನ್ನ 'ನಾನು'ವಿನ ಸಂಪರ್ಕದಿಂದ ಪ್ರಿಯರಾಗಿದ್ದಾರೆಯೇ ಹೊರತು ಸ್ವತಂತ್ರವಾಗಿ ಅಲ್ಲ. ಇದು ಎಲ್ಲಿಯವರೆಗೆ ಅಂದರೆ ಬ್ರಹ್ಮ ಕೂಡ ಹೊರತಲ್ಲ, ನನಗೋಸ್ಕರ ಬ್ರಹ್ಮ ಇಷ್ಟ ಅನ್ನೋದು ಬಿಟ್ರೆ ಬ್ರಹ್ಮನಿಗೋಸ್ಕರ ಬ್ರಹ್ಮ ಇಷ್ಟ ಅಂತ ಅಲ್ಲ! ಎಂತಹ ಸತ್ಯ ಅಲ್ವಾ ಇದು, ಹಾಗಾಗಿ ನನಗೆ ನಾನೇ ಪ್ರಿಯ. So ಜೀವಭಯ ಅಂದರೆ ನಾನು ಎಲ್ಲಿ ನನ್ನಿಂದ ದೂರ ಆಗಿ ಬಿಡ್ತೀನೋ ಅನ್ನೋ ಭಯ !!

ಇದು ನೋಡಿ ಮಜಾ ಇದೆ. ನಾನು ಎಲ್ಲಿ ನನ್ನಿಂದ ದೂರ ಆಗ್ತೀನೋ ಅಂತ ಯೋಚನೆ ಬಂದು ಭಯ ಆಗುತ್ತೆ ಅಂತ ಅಂದ್ರೆ ನಾನು ನನ್ನ ದೇಹ ಅಂತ ನನ್ನ ಮನಸ್ಸು ಯೋಚಿಸಿದೆ! ಆದರೆ ನಿಜವಾದ 'ನಾನು' ದೇಹ ಅಲ್ಲ, ಆತ್ಮ ! ಆತ್ಮಕ್ಕೆ ಸಾವಿಲ್ಲ.. ಹಾಗಾಗಿ ನನಗೂ ಸಾವಿಲ್ಲ!! ಅಂದರೆ ನಾವು ಇದನ್ನು ಸಿದ್ದಿಪಡಿಸಿಕೊಂಡರೆ,  ವಿಷಯವನ್ನು ಬರೀ ಬುದ್ದಿಯ ಮಟ್ಟದಲ್ಲಿ ಅಷ್ಟೇ ಗ್ರಹಿಸದೇ ಅನುಭವದಿಂದ ಕಂಡುಕೊಂಡರೆ (ಅಂದರೆ ಸಾಯುವುದಲ್ಲ!! ) ಅಲ್ಲಿಗೆ ನಾವು ಜೀವನದ ಅತೀ ದೊಡ್ಡ ಭಯದಿಂದ ಮುಕ್ತರಾಗುತ್ತೇವೆ ! ಭಯ ಇಲ್ಲದವನನನ್ನು ಹಿಡಿಯಲು ಆಗುವುದಿಲ್ಲ !! ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಆತ್ಮ ಜ್ಞಾನ ಮುಖ್ಯ, ಹಾಗಾಗಿಯೇ ಪದೇ ಪದೇ ಆತ್ಮಕ್ಕೆ ಸಾವಿಲ್ಲ, ಅವಿನಾಶಿ ಅಂತ ಸಾರಿ ಸಾರಿ ಹೇಳಿರುವುದು.

ಸಾಯದೇ ನಾನು ದೇಹವಲ್ಲ ಆತ್ಮ ಅಂತ ಕಂಡುಹಿಡಿದುಕೊಳ್ಳುವುದು ಹೇಗೆ ? ಸರಿ ಬಿಡಿ, ಆಮೇಲೆ ನೋಡೋಣ !! :D

ಸಾಂಖ್ಯಯೋಗ - ಏಳು ಎದ್ದೇಳು !!


ಇಲ್ಲಿಂದ ನಮ್ಮ ಬ್ಲೇಡ್ ಸೆಶನ್ ಶುರು ಮಾಡೋಣ :) ಇಡೀ ಸಾಂಖ್ಯಯೋಗವನ್ನು ಒಂದೇ ಸರ್ತಿ ಹೇಳಿ ಮುಗಿಸೊಕೆ ಆಗಲ್ಲ ! ಬರೆಯೋಕೂ ಬೋರು ಕೆಳೋಕಂತೂ ಮತ್ತೂ ಬೋರ್ ಆಗುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಸ್ವಲ್ಪ ಸ್ವಲ್ಪವೇ ನೋಡಿಕೊಳ್ಳುತ್ತಾ ಹೋಗೋಣ. ನಾನು ಮೊದಲೇ ಹೇಳಿದಂತೆ ಎಲ್ಲಾ ವಿಷ್ಯಗಳನ್ನ ವಿಚಾರ ಮಾಡೋಕೆ ಹೋಗೋದಿಲ್ಲ. ನಂಗೆ ಮನಸ್ಸಿಗೆ ಬಂದಿದ್ದು ಕೆಲವು ಸ್ವಾರಸ್ಯಗಳು ಅಂತ ಅನಿಸಿದ್ದು ಇಲ್ಲಿ ಹಂಚಿಕೊಳ್ಳುವುದು ನನ್ನ ಉದ್ದೇಶ ಅಷ್ಟೇ.

ಅರ್ಜುನ ಮೊದಲನೇ ಅಧ್ಯಾಯ ಹೇಳಿ ಗೊಳೋ ಅಂತ ಅತ್ತು ಮುಗಿಸಿದ ! ಅವನನ್ನು ನೋಡಿ ಶ್ರೀಕೃಷ್ಣ ನು ಹೀಗೆ ಹೆಳ್ತಾನೆ ನೋಡಿ.

"ಕುತಸ್ಥ್ವಾ ಕಶ್ಮಲಮಿದಂ ವಿಷಮೆ ಸಮುಪಸ್ಥಿತಂ | ಅನಾರ್ಯಜುಷ್ಟಮ್ ಅಸ್ವರ್ಗಮ್ ಅಕೀರ್ತಿಕರಂ ಅರ್ಜುನ ||2||
ಕ್ಯೈಭ್ಯಮ್ ಮಾ ಸ್ಮಗಮಹ್ ಪಾರ್ಥ ನಯಿತತ್ವಯುಪಪದ್ಯತೆ | ಕ್ಷುದ್ರಮ್ ಹೃದಯದೌರ್ಭಲ್ಯಮ್ ತ್ಯಕ್ತೊತ್ತಿಸ್ಠ ಪರಂತಪ ||3||"


ಇದನ್ನ ನಾವು ಬಾಯಿಪಾಠ ಮಾಡಿಕೊಂಡು ಇಟ್ಟುಕೊಂಡರೆ ಒಳ್ಳೆಯದು. ಯಾಕೆಂದರೆ ಇದು ನಮಗೆ ಪ್ರತಿಯೊಂದು ಸಮಯದಲ್ಲೂ ಬೇಕಾಗುವ ನೀತಿ ಪಾಠ. ಈಗಿನ ಜೀವನದಲ್ಲಿ ನಮ್ಮ ಸುತ್ತಲಿನ ಪ್ರಪಂಚವೇ ನಮ್ಮನ್ನು ನೆಡೆಸುತ್ತಿದೆ! ಇಲ್ಲಿನ ಸಂದರ್ಭಕ್ಕೆ ಒಂದು ಸುಭಾಷಿತ ನೆನಪಾಗುತ್ತಿದೆ .
"ಆತ್ಮ ಬುದ್ದಿ ಚಿರಂಜೀವಿ ಗುರುಬುದ್ದಿ ವಿಶೇಷತಃ | ಅನ್ಯಬುದ್ದಿ ವಿನಾಷಾನಂ ಸ್ತ್ರೀಬುದ್ದಿ ಪ್ರಳಯಾಂತಕಮ್ ||" ಅಂತ. 

Correct, ಹೆಂಗಸರು ಹೇಳಿದ ಮಾತು ಕೇಳ್‌ಬಾರ್ದು ಕೇಳಿದ್ರೆ ಹಾಳಾಗಿ ಹೋಗ್ತಿರ ಅಂತ ಈ ಸುಭಾಷಿತದ ಅರ್ಥ ಅಂದುಕೊಂಡ್ರಾ ?!! ನಾನು ಹಾಗೆ ಅಂದ್ಕೊಂಡಿದ್ದೆ ಆಮೇಲೆ ಗೊತ್ತಾಯ್ತು ಸ್ತ್ರೀ ಬುದ್ದಿ ಅಂದ್ರೆ Negative Thoughts ಅಂತ. ಹಾಗಾದ್ರೆ ಒಟ್ಟು ಅರ್ಥದಲ್ಲಿ ನಾವು ಸ್ವಂತ ಬುದ್ದಿ ಇಂದ ಮಾಡಿದ ಕೆಲಸ ಒಳ್ಳೆಯದು, ಗುರುಗಳು ಹೇಳಿಕೊಟ್ಟ ಕೆಲಸವೂ ಒಳ್ಳೆಯದೇ, ಆದರೆ ಅನ್ಯರು ಹೇಳಿಕೊಟ್ಟ ಬುದ್ದಿ ಮತ್ತೆ ನಮ್ಮದೇ ಆದ ಸ್ತ್ರೀ ಬುದ್ದಿ ಮಾತ್ರ ಕಂಡಿತಾ ಕೆಲಸ ಹಾಳು ಮಾಡುತ್ತದೆ! ಹಾಗಾಗಿ ಈ ಸ್ತ್ರೀ ಬುದ್ದಿ ನಮಗೆ ಬಂದಾಗಲೆಲ್ಲಾ ಇದನ್ನು ನೆನಸಿಕೊಳ್ಳಬೇಕು... "ಈ ಸಮಯದಲ್ಲಿ ಈ ಕಶ್ಮಲ ಬುದ್ದಿ ಎಲ್ಲಿಂದ ನನಗೆ ಬಂತು ?? ಈ ಹೃದಯ ದೌರ್ಬಲ್ಯವನ್ನು ತೊಡೆದು ಹಾಕಿ ಎದ್ದೇಳು" ಅಂತ ನಮಗೆ ನಾವೇ ಹೇಳಿಕೊಳ್ಳಬೇಕು...

ವಿವೇಕಾನಂದರ ಪ್ರಸಿದ್ಧ ಉಕ್ತಿ "ಏಳಿ, ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ! ಕೂಡಾ ಇದರ ಆಧಾರಿತ ನೇ ಇರ್ಬೇಕು, ವಿವೇಕಾನಂದರು ಹೇಳ್ತಿದ್ರಂತೆ ಇಡೀ ಗೀತೋಪದೇಶ ನಾಶವಾಗಿ ಬರೀ ಕಡೇ ಸಾಲು ಅಂದರೆ ಕ್ಷುದ್ರಮ್ ಹೃದಯದೌರ್ಭಲ್ಯಮ್ ತ್ಯಕ್ತೊತ್ತಿಸ್ಠ ಪರಂತಪ ಇಷ್ಟು ಇದ್ರೆ ಸಾಕು ಭಾರತೀಯ ಸಂಸ್ಕೃತಿಯನ್ನ ಪುನಃ ಸ್ಥಾಪಿಸಬಹುದು ಅಂತ !

ಇನ್ನೂ ಹೆಚ್ಚೇನೂ ಹೇಳಲ್ಲ ! ಆರ್ ಗಣೇಶ್ ಅವ್ರ ಉಪನ್ಯಾಸ ಕೇಳಿ!


Tuesday, 1 October 2013

ಸಾಂಖ್ಯ ಯೋಗ - ಪೀಠಿಕೆ


ಮೊದಲೇ ಹೇಳಿದಂತೆ ಎರಡನೇ ಅಧ್ಯಾಯದಿಂದ ಭಗವದ್ಗೀತೆಯ ಉಪದೇಶಗಳು ಪ್ರಾರಂಭವಾಗುತ್ತದೆ. ಇಲ್ಲಿಂದ ಎಲ್ಲಾ ಮಹಾನುಭಾವರೂ ತಮ್ಮ ತಮ್ಮ ಭಾಷ್ಯವನ್ನು ಬರೆದಿದ್ದಾರೆ. ಇದು ಭಗವದ್ಗೀತೆಯ ದೊಡ್ಡ ಅಧ್ಯಯಗಳಲ್ಲಿ ಒಂದು. ಇದರಲ್ಲಿ ಮುಖ್ಯವಾಗಿ ಆತ್ಮದ ಲಕ್ಷಣಗಳು ಮತ್ತು ಸ್ಥಿತಪ್ರಜ್ಞ ಲಕ್ಷಣಗಳ ಬಗ್ಗೆ ಶ್ರೀ ಕೃಷ್ಣ ಹೇಳಿದ್ದಾನೆ.ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮೊದಲು ಬಾಯಿ ಬಿಡುವುದೇ ಇಲ್ಲಿ...

ಭಗವದ್ಗೀತೆಯನ್ನು ಪೂರ್ತಿ ಕಲಿಯಲು ಮನಸ್ಸಿಲ್ಲದವರು ಎರಡನೇ ಅಧ್ಯಾಯ ಹಾಗೂ ಹದಿನೆಂಟನೇ ಅಧ್ಯಾಯಗಳನ್ನು ನೋಡಿಕೊಂಡರೆ ಸಾಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಈ ಎರಡನೇ ಅಧ್ಯಾಯವನ್ನು ಕಂಠಪಾಠ ಮಾಡುತ್ತೇವೆ ಎಂದುಕೊಳ್ಳುವವರು ವಿದ್ಯಾಭೂಷಣ ಅವರ ಈ ಅಧ್ಯಾಯದ ಹಾಡನ್ನು ಕೇಳಿದರೆ ಪದಚ್ಚೇದಗಳೆಲ್ಲಾ ಚೆನ್ನಾಗಿ ಗೊತ್ತಾಗುತ್ತದೆ. (http://www.kannadaaudio.com/Songs/Devotional/BhagavadGita/BhagavadGitabySriVidyabhushana/02Chapter.rm) ಡೌನ್‌ಲೋಡ್ ಮಾಡಿಕೊಂಡು ಕೇಳಿ ಆನಂದಿಸಿ.

ಇಲ್ಲಿಂದ ಭಗವದ್ಗೀತೆಯ ತತ್ವಗಳು ಆಳವಾಗುತ್ತಾ ಹೋಗುತ್ತದೆ, ಈ ಎರಡನೇ ಅಧ್ಯಾಯದಲ್ಲಿಯೇ ಅನೇಕ ಮುಖ್ಯ ಉಪದೇಶಗಳು ಬರುತ್ತದೆ. ಅದರಲ್ಲಿ ಪ್ರಸಿದ್ದವಾದುದೆಂದರೆ "ಕ್ಷುದ್ರಂ ಹೃದಯ ದೌರ್ಭಲ್ಯಮ್ ತ್ಯಕ್ತ್ತೊತ್ತಿಷ್ಠ ಪರಂತಪ" , "ಅಶೋಚಾನ್ ಅನ್ವಷೋಚಸ್ತ್ವಂ..." , ಆತ್ಮ ಲಕ್ಷಣ , ಸ್ವಧರ್ಮ ಪ್ರಜ್ಞೆ, "ವ್ಯವಸಾಯಾತ್ಮಿಕಾ ಬುದ್ಧಿ", "ನಿಸ್ಥ್ರೈಗುಣ್ಯೊ ಭಾವಾರ್ಜುನ", "ಯೋಗಸ್ತಃ ಕುರು ಕರ್ಮಾಣಿ", "ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ" ಮತ್ತು ಸ್ಥಿತಪ್ರಜ್ಞನ ಲಕ್ಷಣಗಳು. ಹೀಗೆ ಅನೇಕ ಉಪದೇಶಗಳು ಬರುತ್ತವೆ.

ನಾವು ಶತಾವಧಾನಿ ರಾ ಗಣೇಶ್ ಅವರ ಉಪನ್ಯಾಸದೊಂದಿಗೆ ನಮ್ಮ ಅಭ್ಯಾಸವನ್ನು ಆರಂಭಿಸೋಣ. ಇನ್ನು ಮುಂದಿನ ನಮ್ಮ ಎಲ್ಲಾ ಆಲೋಚನೆಗಳು ಈ ಉಪನ್ಯಾಸವನ್ನು ಆಧರಿಸಿಕೊಂಡಿರುತ್ತದೆ ಎಂದರೆ ತಪ್ಪಾಗಲಾರದು ಎಂದು ನನ್ನ ಭಾವನೆ. ಆಸಕ್ತರು ಡೌನ್‌ಲೋಡ್ ಮಾಡಿ ಕೇಳಿ ಆನಂದಿಸಿ.(http://www.kannadaaudio.com/Songs/Discourses/Shatavadhani-Dr-R-Ganesh/Shrimadbhagavadgeethe/02.rm) ಹೊಸಬರಿಗೆ ಗಣೇಶ್ ಅವರ ಉಪನ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ತುಂಬಾ ಪಾಂಡಿತ್ಯ ಪೂರ್ಣ, ವಿದ್ವತ್ಪೂರ್ಣ ಉಪನ್ಯಾಸ ಕೊಡುತ್ತಾರೆ ಹಾಗಾಗಿ ಮೊದಲನೇ ಬಾರಿಗೆ ಎಲ್ಲಾ ವಿಷಯ ಅರ್ಥವಾಗಬೇಕೆಂದೇನೂ ಇಲ್ಲ ! ಮತ್ತೆ ಮತ್ತೆ ಕೇಳಿ, ಅವರ ವಿಚಾರಗಳು ಸ್ಪಷ್ಟವಾಗುತ್ತದೆ.

ಇಲ್ಲಿ ಇನ್ನೊಂದು ವಿಷಯ ನಾನು ಹೇಳಬಯಸುವುದೇನೆಂದರೆ ಭಗವದ್ಗೀತೆಯ ಎಲ್ಲಾ ಉಪದೇಶಗಳು ಎಲ್ಲರಿಗೂ ಅಲ್ಲ! ಹೌದು ಇಲ್ಲಿ ನಾವು ಆಯ್ದುಕೊಳ್ಳಬೆಕು, ಇದೊಂದು ರೀತಿಯ ಪುಸ್ತಕ ಭಂಡಾರವಿದ್ದಂತೆ ಇಲ್ಲಿ ಎಲ್ಲಾ ಪುಸ್ತಕಗಳೂ ಲಭ್ಯವಿದ್ದರೂ ನಾವು ನಮ್ಮ ಅರ್ಥ ಶಕ್ತ್ಯಾನುಸಾರ, ಬುದ್ದಿಶಕ್ತ್ಯಾನುಸಾರ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಕೊಳ್ಳುವಂತೆ, ಇಲ್ಲಿಯೂ ಕೂಡ ನಮಗೆ ಹಿತವೆಂದು ತೋಚಿದ ಮಾರ್ಗವನ್ನು ನಾವು ಅನುಸರಿಸಬಹುದು. ಒಂದು ದೊಡ್ಡ ಶಿಖರವನ್ನು ಎಲ್ಲಿಂದ ಬೇಕಾದರೂ ಹತ್ತಬಹುದು, ಹಾಗೆ ಹತ್ತಿ ಪರಾಕಾಷ್ಠೆ ತಲುಪಿದಮೇಲೆ ಎಲ್ಲಿಂದ ಹತ್ತಿದ್ದೇವೆಂಬುದು ಅಗಣ್ಯ! ತುದಿ ತಲುಪಿದ ಆನಂದ ಒಂದೇ ಉಳಿಯುತ್ತದೆ. ಹಾಗೆಯೇ ಇದೂ ಕೂಡ.

ಓಂ ತತ್ ಸತ್...