Tuesday 1 October 2013

ಪೀಠಿಕೆ


ಭಗವದ್ಗೀತೆ, ಇದು ಒಂದು ಧರ್ಮ ಗ್ರಂಥವೆಂದು ಪ್ರಸಿದ್ದಿ ಪಡೆದ ಗ್ರಂಥ. ಹಿಂದೂ ಧರ್ಮದಲ್ಲಿಯೇ ಶ್ರೇಷ್ಟವಾದ ಗ್ರಂಥವೆನಿಸಿಕೊಂಡಿದೆ. ಆಚಾರ್ಯ ತ್ರಯರೂ ಇದಕ್ಕೆ ಭಾಷ್ಯ ಬರೆದಿದ್ದಾರೆ. ಅಲ್ಲದೇ ಅನೇಕ ಜ್ಞಾನಿಗಳು ತಮ್ಮ ತಮ್ಮ ಅರ್ಥವಿವರಣೆಯನ್ನು ನೀಡಿದ್ದಾರೆ. ಇದು ಏಕಕಾಲದಲ್ಲಿ ಧರ್ಮ ಗ್ರಂಥವಾಗಿಯೂ, ಮೋಕ್ಷಗ್ರಂಥವಾಗಿಯೂ ಪ್ರಸಿದ್ದಿ ಪಡೆದಿದೆ. ಹಾಗಾಗಿ ಇದರ ಬಗ್ಗೆ ತುಂಬಾ ವಿವರಣೆ ನೀಡುವುದರ ಅಗತ್ಯವಿಲ್ಲ.

ಈ ಬ್ಲಾಗಿನ ಉದ್ದೇಶವೇನೆಂದರೆ ನಾನು ಗೀತೆಯನ್ನು ಓದಿದಾಗ ನನಗನಿಸಿದ ಕೆಲವು ಅಂಶಗಳನ್ನು ಇಲ್ಲಿ ಚರ್ಚಿಸಲು ಯೋಚಿಸುತ್ತಿದ್ದೇನೆ. ಇಲ್ಲಿ ಗೀತೆಯ ಹಲವಾರು ಮುಖಗಳಲ್ಲಿ ಬರೀ  ಲೌಕಿಕ ವಿಚಾರಗಳನ್ನು ಮಾತ್ರ ನೋಡಬೇಕೆಂದುಕೊಂಡಿದ್ದೇನೆ. ಗೀತೆಯನ್ನು ಅವಲೋಕಿಸಿದಷ್ಟೂ ಅದರ ಬಗ್ಗೆ ಆಲೋಚಿಸಿದಷ್ಟೂ ಅದರ ವಿಚಾರ ಇನ್ನೂ ಗಾವಾಗತೊಡಗುತ್ತದೆ. ಹೀಗೆ ವಿವೇಚನೆಯಿಂದ ನಮ್ಮ ನಮ್ಮ ಗೀತೆಗಳನ್ನು ನಾವೇ ಕಂಡುಹಿಡಿದು ಕೊಳ್ಳಬೇಕು! ಇದರಲ್ಲಿ ತುಂಬಾ ಉಪದೇಶಗಳಿವೆ ಎಲ್ಲವನ್ನೂ ತಿಳಿಯುವ ಹಂಬಲ ನನಗಿಲ್ಲ !! ಆದರೆ ಕೆಲವು ವಿಚಾರಗಳಂತೂ ತುಂಬಾ ಮನಮುಟ್ಟುವ ರೀತಿಯಲ್ಲಿ ಶ್ರೀ ಕೃಷ್ಣನು ನಮಗೆ ಹೇಳಿದ್ದಾನೆ.

ಇಲ್ಲಿ ನನ್ನ ದೃಷ್ಟಿಯ ಪ್ರಕಾರ ಶ್ರೀ ಕೃಷ್ಣನು ದೇವರು, ಅವತಾರ ಪುರುಷ ಎಂದೆಲ್ಲಾ ಕೊಂಡಾಡುವುದಕ್ಕಿಂತ ಅವನು ನಮಗೆ ಏನನ್ನು ಹೇಳಲು ಹೊರಟಿದ್ದಾನೆ? ಎನ್ನುವುದನ್ನು ಆಲೋಚಿಸುವುದು ಹೆಚ್ಚಿನ ಉಪಕಾರಿ. ನನ್ನ ಪ್ರಕಾರ ಶ್ರೀ ರಾಮ, ಕೃಷ್ಣರೆಲ್ಲರೂ ಮಾಮೂಲಿ ಮನುಷ್ಯರು ಎಂದುಕೊಂಡಾಗಲೇ ನಮಗೆ ಇನ್ನೂ ಹೆಚ್ಚಿನ ಉಪಯೋಗವಾಗುವುದು. ಏಕೆಂದರೆ ಅವರು ಮನುಷ್ಯರಾಗಿದ್ದುಕೊಂಡು ಲೋಕಕ್ಕೆ ಮಾದರಿಯಾಗಿ ನೆಡೆಡುಕೊಂಡು ದೇವರಾದರು. ವಿಶ್ವೇಶ್ವರಯ್ಯ, D.V.G ಯವರಂತಹ ಅನೇಕರು ನಮಗೆ ಸ್ಪೂರ್ತಿಯಾಗಬೇಕು. ಹೀಗೆಂದು ಯೋಚಿಸಿದಾಗ ನಾವು ಶ್ರೀ ರಾಮ, ಕೃಷ್ಣ ಇವರನ್ನು ಅಗ್ರ ಪಂಕ್ತಿಯಲ್ಲಿಡಬಹುದು. ಅವರಿಂದ ನಾವು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಬದುಕಿದರೆ ಹೀಗೆ ಬದುಕಬೇಕು ಎಂದು ನಮ್ಮ ಮನಸ್ಸಿಗೆ ಬರಬೇಕು. ಆಗ ಏನನ್ನಾದರೂ ಸಾಧಿಸಲು ಸಾಧ್ಯ.

ಈಗಿನ ಯುವಕರಿಗೆ ಭಗವದ್ಗೀತೆಯನ್ನು ಓದುವ ಕುತೂಹಲ ಇಲ್ಲ, ಉಪನ್ಯಾಸಗಳನ್ನು ಕೇಳುವ ಹವ್ಯಾಸವಂತೂ ಇಲ್ಲವೇ ಇಲ್ಲ! ಇವೆಲ್ಲ ಏಕೆ ಹೀಗೆ ಎಂದು ಯೋಚಿಸಿದರೆ ಅನೇಕ ಅಂಶ ನಮ್ಮ ಕಣ್ಣಿಗೆ ಬೀಳುತ್ತವೆ. ಅವುಗಳಲ್ಲಿ ಕೆಲವನ್ನು ಈಗ ನೋಡೋಣ. ಭಗವದ್ಗೀತೆಯನ್ನು ಮೋಕ್ಷ ಗ್ರಂಥವೆಂದು ಭಾವಿಸಿದವರ ಸಂಖ್ಯೆಯೇ ಹೆಚ್ಚು. ಹಾಗಾಗಿ ಇದು ಮುದುಕರು ಓದುವ ಗ್ರಂಥ, ಇದಕ್ಕೂ ನಮಗೂ ಯಾವುದೇ ಸಂಭಂಧವಿಲ್ಲವೆಂದು ಅದನ್ನು ತಿರಸ್ಕರಿಸುವ ಜನರು ಒಂದು ಕಡೆಯಾದರೆ. ಅಯ್ಯೋ ಅದು ಬಹಳ ಮಡಿ ಹಾಗೆಲ್ಲಾ ಎಲ್ಲೆಂದರಲ್ಲಿ ಓದಿದರೆ, ಅದರ ಬಗ್ಗೆ ಮಾತಾಡಿದರೆ ಅದಕ್ಕೆ ನಾವು ಮಾಡುವ ಅಪಚಾರ ಎಂದು ಭಾವಿಸುವರು ಉಳಿದವರು! ವಿಪರ್ಯಾಸವೆಂದರೆ ಈ ಮೇಲಿನ ಎರಡೂ ತರಹದವರೂ ಭಗವದ್ಗೀತೆಯನ್ನು ಓದಿಲ್ಲ! ಸುಮ್ಮನೇ ಈ ನಿರ್ಧಾರಕ್ಕೆ ಬರುವುದು ಎಷ್ಟು ಸರಿ? ಒಮ್ಮೆ ಸಮಯ ಮಾಡಿಕೊಂಡು ಎಷ್ಟು ಸಾಧ್ಯವೋ ಅಷ್ಟು ಓದಿ ನೋಡಿ, ಅರ್ಥವಾದ್ರೆ ಮುಂದೆ ಹೋಗಿ ಇಲ್ಲವಾದರೆ ಬಿಡಿ ಅಷ್ಟೇ ಸಿಂಪಲ್ !

ಈ ಮೇಲಿನ ತರಹ ನಾವು ಯೋಚಿಸುವುದು ತಪ್ಪೇನೂ ಅಲ್ಲ ಯಾಕೆಂದರೆ ನಮ್ಮ ಪರಿಸರ, ಸಮಾಜ ಹಾಗೆ ನಮಗೆ ದಾರಿ ತಪ್ಪಿಸುತ್ತಿದೆ. ಇದರಿಂದ ನಮಗೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಭಗವದ್ಗೀತೆ ಯಾರಾದರೂ ಸತ್ತಾಗ ಅಪಸ್ವರದಲ್ಲಿ ಹಾಡುವ ಚರಮ ಗೀತೆಯಲ್ಲ, ಬದುಕಬೇಕು, ಹೇಗೆ ಬದುಕಬೇಕು ಎಂದು ತಿಳಿಸಿಕೊಡುವ ಒಂದು ಅತ್ಯುತ್ತಮ ಗ್ರಂಥ. ಅಷ್ಟಲ್ಲದೇ ಅಲ್ಲಿ ಹೇಳಿರುವ ವಿಚಾರಗಳೆಲ್ಲಾ ಕಾಗಕ್ಕ ಗುಬ್ಬಕ್ಕನ ಕಥೆಗಳಲ್ಲ, ಶ್ರೀ ಕೃಷ್ಣನು ತಾನು ಬದುಕಿ ತೋರಿಸಿದ ಒಂದು ಮಾರ್ಗ. ಹೀಗಾಗಿ ನಾವು ಸಾದ್ಯವಾದಷ್ಟು ಇದರ ತತ್ವದ ವಿಚಾರವನ್ನು ನೋಡೋಣ...

ಇಲ್ಲಿ ನಾನು ಬೇರೆ ಬೇರೆ ವಿಷಯಗಳನ್ನು ಬರೆಯುವುದರಿಂದ ಒಂದು ಅಧ್ಯಾಯದ ವಿಷಯಗಳು ಚೆಲ್ಲಾಪಿಲ್ಲಿ ಆಗಿರುವುದರಿಂದ 

 ಕ್ರಮಾಂಕದಲ್ಲಿ ಓದಿಕೊಂಡು ಹೋದರೆ ವಿಷಯ ಬೇಗ ಸ್ಪಷ್ಠವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.

1) ಅರ್ಜುನ ವಿಷಾದ ಯೋಗ !!
2ಸಾಂಖ್ಯ ಯೋಗ - ಪೀಠಿಕೆ
3) ಸಾಂಖ್ಯಯೋಗ - ಏಳು ಎದ್ದೇಳು !!
4) ಸಾಂಖ್ಯ ಯೋಗ - ಆತ್ಮ ಸ್ವರೂಪ
5) ಸಾಂಖ್ಯ ಯೋಗ - ಯುದ್ಧ ಮಾಡು !!
6) ಸಾಂಖ್ಯ ಯೋಗ - ನಿರ್ಲೇಪ ಕರ್ಮ
7) ಸಾಂಖ್ಯ ಯೋಗ - ಸ್ಥಿತ ಪ್ರಜ್ಞನ ಲಕ್ಷಣಗಳು


ಓಂ ತ್ ಸತ್...

No comments:

Post a Comment