Tuesday 1 October 2013

ಅರ್ಜುನ ವಿಷಾದ ಯೋಗ !!


ಇದನ್ನು ನಾನು ನೋಡಿದಾಗಲೆಲ್ಲ ನನಗನಿಸುವುದು ಏನೆಂದರೆ ವಿಷಾದವು ಯೋಗ ಹೇಗೆ ಆಗುತ್ತದೆ ?!! ಅಂತ ಯಾರಾದರೂ ತಿಳಿದವರು ಸಮಂಜಸವಾದ ಉತ್ತರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ :) ಅದಿರಲಿ, ಇದು ಭಗವದ್ಗೀತೆಯ ಮೊದಲ ಅಧ್ಯಾಯ. ಇದರ ಬಗ್ಗೆ ತಿಳಿಯುವ ಮುನ್ನ ಮಹಾಭಾರತದ ಒಂದು ಕಿರು ಪರಿಚಯ ಮಾಡಿಕೊಳ್ಳುವುದು ಒಳ್ಳೆಯದು. ಸಾಧ್ಯವಾದಷ್ಟುಮಟ್ಟಿಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳುವ ಪ್ರಯತ್ನ ಮಾಡುತ್ತೇನೆ.

ಎಲ್ಲರಿಗೂ ಗೊತ್ತಿರುವಂತೆ ಪಂಚ ಪಾಂಡವರು, 100 ಜನ ಕೌರವರು ದಾಯಾದಿಗಳು. ರಾಜ್ಯದ ಲೋಭದಿಂದಾಗಿ ದುರ್ಯೋಧನ ಸಂಧಿಗೆ ಒಪ್ಪಿಕೊಳ್ಳದೇ ಯುದ್ಧಮಾಡಲು ಸಜ್ಜಾಗುತ್ತಾನೆ. ಇಲ್ಲಿ ಒಂದು ವಿಷಯ ಗಮನಾರ್ಹ, ದುರ್ಯೋಧನ Quantity ಯ ಬಗ್ಗೆ ಹೆಚ್ಚು ಯೋಚಿಸಿದರೆ ಅರ್ಜುನ Quality ಯ ಕಡೆಗೆ ಗಮನ ಹರಿಸಿದ್ದ! ಹೌದು, ನೀವು ಉಹಿಸಿದ್ದು ನಿಜ, ನಾನು ಅದರ ಬಗ್ಗೆಯೇ ಮಾತಾಡುತ್ತಿರುವುದು. ಶ್ರೀ ಕೃಷ್ಣ ಹಾಗೂ ನರಾಯಣೀ ಸೇನೆ. ಆಯುಧವನ್ನು ಹಿಡಿಯದ ಶ್ರೀ ಕೃಷ್ಣ ಹಾಗೂ ಸುಸ್ಸಜ್ಜಿತ ನರಾಯಣೀ ಸೇನೆಯಲ್ಲಿ ಅರ್ಜುನನಿಗೆ ಶ್ರೀ ಕೃಷ್ಣನೇ ಮುಖ್ಯವೆನಿಸಿದ. ದುರ್ಯೋಧನನು ಸೇನೆಯನ್ನು ಪಡೆದು ಸಂತೋಷದಿಂದ ವಾಪಸ್ಸಾದ...

ಇದರ ಬಗ್ಗೆ ಸ್ವಲ್ಪ ಯೋಚಿಸಿದರೆ ಆಗ ಗೊತ್ತಾಗುತ್ತದೆ ನಮ್ಮ ನಮ್ಮ ಬದುಕಿನಲ್ಲೂ ನಾವು ಹೀಗೆ ಎಷ್ಟೋ ಸಾರಿ Quality Vs Quantity ಯ ಸಮಸ್ಯೆಯಲ್ಲಿರುತ್ತೇವೆ. Quantity ಗೆ ಬೆಲೆ ಕೊಡುವ, ಅದರ ಆಧಾರದ ಮೇಲೆ ನಿಂತಿರುವ ವ್ಯವಸ್ಥೆ ಬಹಳ ಕಾಲ ದೃಡವಾಗಿ ನಿಲ್ಲುವುದಿಲ್ಲ, ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ನಮ್ಮ ಪ್ರಜಾಪ್ರಭುತ್ವ! ಎಲ್ಲರ ಮತಗಳಿಗೂ ಒಂದೇ ಬೆಲೆ! ಇದರಿಂದ ಆಗುವ ತೊಂದರೆ ಏನೆಂದರೆ 10 ಜ್ಞಾನಿಗಳು ಹೇಳುವ ವಿಚಾರಕ್ಕಿಂತಾ 100 ಜನ ಅಯೋಗ್ಯರು ಹೇಳಿದ್ದಕ್ಕೆ ಹೆಚ್ಚು ಬೆಲೆ ಕೊಡಬೇಕಾದ ಸಂಧರ್ಭ ಬರುತ್ತದೆ. ಹಾಗಾಗಿ ಕೇವಲ Quantity ಯ ಮೊರೆ ಹೋಗುವುದು ನಿಜವಾಗಿಯೂ ಅಪಾಯಕಾರಿ. ಆದ ಕಾರಣ ನಾವು Quality ಗೆ ಗಮನ ಕೊಡಬೇಕು ಎನ್ನುವುದನ್ನು ಇದು ತಿಳಿಸುತ್ತದೆ !

ಹೀಗೆ ದುರ್ಯೋಧನ ಎಲ್ಲಾ ಕಡೆಯಿಂದ ಸೈನ್ಯವನ್ನು ಸೇರಿಸಿ 11 ಅಕ್ಷೊಹಿಣಿ ಸೈನ್ಯವನ್ನು ಮಾಡಿದರೂ ಗೆಲ್ಲಲಾಗಲಿಲ್ಲ! ಏನು ಕಾರಣ? ಅಧರ್ಮ ಅವನ ಮನಸ್ಸಿನಲ್ಲಿತ್ತು ಅಷ್ಟೇ ಅಲ್ಲದೇ ಅವನು ಯಾರನ್ನೂ ನಂಬಿರಲಿಲ್ಲ. ಇದು ಅವನು ಹೇಳುವ ಮೊದಲ ಕೆಲವು ಶ್ಲೋಕಗಳಲ್ಲಿ ದ್ವನಿಸುತ್ತವೆ. ತನ್ನ ಸೇನೆಯ 7 ಜನ ನಾಯಕರ ಹೆಸರುಗಳನ್ನೂ, ಶತ್ರು ಸೇನೆಯ 11 ಜನ ನಾಯಕರನ್ನೂ ಹೇಳುವಾಗ ಅವನ ಮನದ ಇಂಗಿತ ಅರ್ಥವಾಗುತ್ತದೆ. ಆದರೆ ಎಲ್ಲಾ (ಬಹುತೇಕ) ಪುಸ್ತಕಗಳಲ್ಲಿ ದುರ್ಯೋಧನ ನಮ್ಮ ಸೇನೆಯೇ ಶ್ರೇಷ್ಠ ಎಂದು ಹೇಳಿದನೆಂದು ಅರ್ಥೈಸುತ್ತಾರೆ. ಇದು ತಪ್ಪೇನೋ ಎಂದು ನನ್ನ ಭಾವನೆ.

ನಿಜವೆಂದರೆ ಈ ವಿಷಯ ನನಗೂ ಮೊದಲು ಅರ್ಥವಾಗಿರಲಿಲ್ಲ. ಆಮೇಲೆ ವಿದ್ಯಾ ವಾಚಸ್ಪತಿ ಬನ್ನನ್ಜೆ ಗೋವಿಂದಾಚಾರ್ ಅವರ ಉಪನ್ಯಾಸ ಕೇಳಿದ ಮೇಲೆ ಭಗವದ್ಗೀತೆಯನ್ನು ಇನ್ನೂ ಆಳವಾಗಿ ನೋಡಬಹುದು ಎಂದು ಅರ್ಥವಾಯಿತು! ಆಸಕ್ತರು ಕೇಳಬಹುದು( http://www.kannadaaudio.com/Songs/Discourses/home/Bhagavadgeeta-1.php ) ಸ್ವಲ್ಪ ಚೊರೆ ಅನಿಸಬಹುದು ಆದರೂ ಬಹಳ ಉತ್ತಮ ವಿಚಾರಗಳನ್ನು ಹೇಳಿದ್ದಾರೆ. ಈ ಉಪನ್ಯಾಸ ಮಾಲೆಯನ್ನು ಪೂರ್ತಿ ಕೇಳಿದಿರೆಂದರೆ ನಿಮಗೆ ಗೀತೆಯನ್ನು ಓದಲು ಅಥವಾ ಅದರ ವಿಚಾರಗಳನ್ನು ತಿಳಿದುಕೊಳ್ಳಲು ಒಂದು ಒಳ್ಳೆಯ ಪ್ರವೇಶ ಆಗುತ್ತದೆ.

ವಿಪರ್ಯಾಸವೆಂದರೆ ಎಲ್ಲಾ ಭಾಷ್ಯಕಾರಾರೂ ಕೂಡ ಎರಡನೇ ಅಧ್ಯಾಯದಿಂದ ತಮ್ಮ ಭಾಷ್ಯವನ್ನು ಬರೆದಿದ್ದಾರಂತೆ. ಈ ಉಪನ್ಯಸಮಾಲೆಯಲ್ಲಿ ಮುಕ್ಕಾಲು ಭಾಗ ಬರೀ ಮೊದಲನೇ ಅಧ್ಯಾಯವನ್ನೇ ಹೇಳಿದ್ದಾರೆ! ಇದು ಗೀತೆಗೆ ಒಂದು ಪೀಠಿಕೆ ಇದ್ದಂತೆ. ಈ ಮೊದಲ ಅಧ್ಯಾಯದಲ್ಲಿ ದೃತರಾಷ್ಟ್ರ, ಸಂಜಯ ಮತ್ತೆ ಅರ್ಜುನ ಇವರ ಮಾತುಗಳಷ್ಟೇ ಬರುವುದು. ದೃತರಾಷ್ಟ್ರ ಹುಟ್ಟು ಕುರುಡ, ವ್ಯಾಸರು ಯುದ್ದವನ್ನು ನೋಡಲೆಂದು ದಿವ್ಯದೃಷ್ಟಿಯನ್ನು ನೀಡುತ್ತೇನೆಂದರೂ ಬೇಡ, ಪಾಂಡು ಪುತ್ರರ ಹತ್ಯೆಯನ್ನು ನೋಡಲಾರೆ ನನ್ನ ಸಾರಥಿ ಸಂಜಯನಿಗೆ ಕೊಡಿ ನಾನು ಅವನಿಂದ ಕೇಳಿ ತಿಳಿಯುತ್ತೇನೆ ಎಂದು ಹೇಳುವಷ್ಟು ಅವಿವೇಕಿ! ಇದನ್ನು ಇನ್ನಷ್ಟು ಎಳೆದರೆ ಇಲ್ಲೊಂದು ಸ್ವಾರಸ್ಯ ಸಿಗುತ್ತದೆ. ಸಂಜಯನು ವಿಧುರನಂತೆಯೇ ಧರ್ಮಿಷ್ಠ ಅವನೇನೂ ದೇವರಲ್ಲಿ ಬಂದು ಅದು ಕೊಡಿ ಇದು ಕೊಡಿ ಎಂದು ಕೇಳಿರಲಿಲ್ಲ! ಆದರೆ ಸಿಗಬೇಕಾದ ಯೋಗ್ಯತೆ ಇದ್ದರೆ ನಮಗೆ ಸಿಗಬೇಕಾದ್ದು ಅದಾಗಿಯೇ ಹುಡುಕಿಕೊಂಡು ನಮ್ಮಲ್ಲಿ ಬಂದು ಸೇರುತ್ತದೆ! ಆದ್ದರಿಂದ ನಾವು ಸುಮ್ಮನೇ ದೇವರಲ್ಲಿ ಅದು ಕೊಡು ಇದು ಕೊಡು ಎಂದು ನಮ್ಮ ಯೋಗ್ಯತೆಗೆ ಮೀರಿದ ವರಗಳನ್ನು ಪಡೆದು ಕಡೆಗೆ ಅದು ಶಾಪವಾಗಿ ಪರಿಣಮಿಸಿ ಆಮೇಲೆ ದೇವರನ್ನೇ ಬಯ್ಯುವುದಕ್ಕಿಂತ ಧರ್ಮಚಾರಿಗಳಾಗಿದ್ದು, ವರಗಳು ನಮ್ಮ ಯೋಗ್ಯತೆಯಿಂದ ತಾವಾಗಿಯೇ ಬಂದು ನಮ್ಮಲ್ಲಿ ಸೇರುವುದು ಸೂಕ್ತವೆಂದು ಒಮ್ಮೊಮ್ಮೆ ಅನಿಸುತ್ತದೆ...

ಸಂಜಯನು ಯುದ್ದಭೂಮಿಯ ವರ್ಣನೆ ಮಾಡಿ, ದುರ್ಯೋಧನ ದ್ರೋಣರ ಬಳಿ ಬಂದು ತನ್ನ ಕ್ಷೋಭೆ ವ್ಯಕ್ತಪಡಿಸುವುದನ್ನು ಹೇಳುತ್ತಾನೆ. ಇದನ್ನು ನೀವು ಗೋವಿದಾಚಾರ್ ಅವರ ಉಪನ್ಯಾಸದಲ್ಲೇ ಕೇಳಬೇಕು ಬಹಳ ಚೆನ್ನಾಗಿ ವಿವರಿಸುತ್ತಾರೆ. ಹೀಗೆ ಎರಡೂ ಸೇನೆಯವರು ತಮ್ಮ ತಮ್ಮ ಶಂಖನಾದಗಳನ್ನು ಮಾಡಿ ಯುದ್ದಕ್ಕೆ ಸಿದ್ದರೆಂದು ತೋರಿಸಿಕೊಳ್ಳುತ್ತಾರೆ. ಆಮೇಲೆ ಬರುವುದೇ ಈ ಅರ್ಜುನನ ಗೋಳಾಟ!

ಅರ್ಜುನನ ಗೋಳಾಟಕ್ಕೆ ಹಲವಾರು ಕಾರಣಗಳಿರಬಹುದು, ಅದರಲ್ಲಿ ಮೊದಲು ಎದ್ದು ತೋರುವುದೇ Nervousness or Stage fear !! ಅರ್ಜುನನಿಗೆ ಎಲ್ಲರೂ ತನ್ನವರೆಂದು ಕಾಣತೊಡಗಿದರು! ಆಗ ಅನುಚಿತ ಭಾವನೆಗಳು ಬಂದು ಯುದ್ದವೂ ಬೇಡ ಏನೂ ಬೇಡ ಎಂದು ತನ್ನ ಧನಸ್ಸನ್ನು ಕೆಳಕ್ಕೆ ಹಾಕಿ ಸುಮ್ಮನೇ ಕುಳಿತ. ಅಷ್ಟಕ್ಕೇ ಮುಗಿದಿಲ್ಲ ತುಂಬಾ ಭಾಷಣ ಮಾಡಿದ್ದಾನೆ!!! ಅದು ಅವನ ಭಾಷಣದ ತರಹವೇ ಅಪ್ರಸ್ತುತ ಅಂತ ಇಲ್ಲಿ ಬರೀಲಿಲ್ಲ!

ಯಾರೋ ಒಬ್ಬರು ಕೇಳಿದ್ದರು ಶ್ರೀ ಕೃಷ್ಣ ಅರ್ಜುನ ಕೇಳಿದ ಒಂದು ಪ್ರಶ್ನೆಗೂ ಉತ್ತರ ಕೊಡುವುದಿಲ್ಲ ಇದೇನು? ಅವನಿಗೆ ಗೊತ್ತಿಲ್ಲವೇ ಅಥವಾ ಯುದ್ಧ ಮಾಡಲೇಬೇಕೆಂದು ಕೃಷ್ಣ ನಿರ್ಧರಿಸಿದ್ದನೇ ? ನನಗೂ ಈ ಪ್ರಶ್ನೆ ಬಹುದಿನಗಳ ವರೆಗೆ ಕಾಡಿತ್ತು, ಹೌದಲ್ಲ ಅರ್ಜುನ ಬಹಳ ಧೀರ್ಗವಾಗಿ ಯುದ್ದ ಆದರೆ ಹಾಗೆ ಆಗುತ್ತೆ, ಹೀಗೆ ಆಗುತ್ತೆ ಅಂತೆಲ್ಲಾ ಹೇಳುತ್ತಾ ಇದ್ದರೂ ಕೃಷ್ಣ ಯಾವುದಕ್ಕೂ ಉತ್ತರ ಕೊಡುವುದಿಲ್ಲವಲ್ಲಾ ಇದೇನಿದು ? ಎಂದು ತುಂಬಾ ರಗಳೆ ಆಗಿತ್ತು! ಕೊನೆಗೆ ಅರ್ಥವಾಯಿತು ಇದು ಅರ್ಜುನನ ಹೇಡಿತನ ಅಷ್ಟೇ ನಿಜವಾದ ಕಾಳಜಿ ಏನೂ ಅಲ್ಲ ಅಂತ.

ನಾವು ಏನನ್ನಾದರೂ ಮಹತ್ತರವಾದ ಸಾಧನೆ ಮಾಡಬೇಕೆಂದು ಕೈ ಹಾಕುತ್ತೇವೆ ಆಗ ತುಂಬಾ ಗಂಭೀರ ಎನಿಸುವ ಆದರೆ ಗಂಭೀರವಲ್ಲದ ಪ್ರಶ್ನೆಗಳು ನಮ್ಮನ್ನು ತೀರಾ ಕಾಡುತ್ತದೆ. ಉದಾಹರಣೆಗೆ ಒಂದು 30 ಲಕ್ಷದ ಮನೆ ಕೊಳ್ಳಬೇಕು ಎಂದಿಟ್ಟುಕೊಳ್ಳಿ, ನಿಮ್ಮ ಹತ್ತಿರ ಐದು ಲಕ್ಷ ರೂಪಾಯಿ ಇದೆ. 30,000 ಸಂಬಳ ಕೂಡ ಬರುತ್ತದೆ, 15 ವರ್ಷದಲ್ಲಿ ಈ ಮನೆಯನ್ನು ಸುಲಭವಾಗಿ ತೆಗೆದುಕೊಳ್ಳಬಹುದು ಆದ್ರೂ ನಿಮಗೆ ಯೋಚನೆಗಳು ಬರಲಾರಂಭಿಸುತ್ತದೆ, ಇದರ ಪತ್ರ ಸರಿ ಇರದಿದ್ದರೆ? ನನ್ನ ಕೆಲ್ಸ ಹೋದರೆ? ಅಥವಾ ಮನೆ ಬೆಲೆ ಜಾಸ್ತಿ ಆಯ್ತೇನೋ, ಬೇರೆ ಕಡೆ ಕಮ್ಮಿ ಸಿಗ್ತಿತ್ತೇನೋ, ಮನೆ ವಾಸ್ತು ಸರಿ ಇಲ್ಲದಿದ್ದರೆ ?! ಹೀಗೆ ಸಾವಿರಾರು ಕುಂಟ ನೆಪಗಳು ಬರುತ್ತಾ ಹೋಗುತ್ತದೆ. ಆಗ ನಮ್ಮ ಬೆಂಬಲಿಗರು ಅದೆಲ್ಲ ಕ್ಷುಲ್ಲಕ ವಿಚಾರಗಳು ಅದಕ್ಕೆಲ್ಲಾ ಬೇರೆ ಪರಿಹಾರ ಮಾರ್ಗ ಉಂಟು ಅಂತ ನಂಬಿಸಿದ ಮೇಲೆ ನಿಮಗೆ ವಿಶ್ವಾಸ ಬಂದು ಅದನ್ನು ಕರೀದಿಸಲು ಹೋಗುತ್ತೀರಿ, ಆದರೆ ಕರೀದಿಸುವುದು ನೀವೇ ಹೊರತು ನಿಮ್ಮ ಬೆಂಬಲಿಗರಲ್ಲ ! ಇದು ಆ ಸಮಯದಲ್ಲಿ ಉಂಟಾಗುವ ಹೆದರಿಕೆ ಅಷ್ಟೇ..

ಇನ್ನೊಂದು ಉದಾಹರಣೆ ಈಗ ನೆನಪಾಗುತ್ತಿರುವುದೇನೆಂದರೆ ಹನುಮಂತ ಸಮುದ್ರವನ್ನು ಹಾರುವ ಕಾಲದಲ್ಲಿ ಇದೆ ರೀತಿ ಆಗುತ್ತೋ ಇಲ್ವೋ ಅಂತ ಸುಮ್ನೆ ಕೂತಿದ್ದ ! ಆಮೇಲೆ ಅವನ ಸಂಗಡಿಗರು ನಿನ್ನಿಂದ ಸಾಧ್ಯ ಎಂದು ಹುರಿದುಂಬಿಸಲು ಸಮುದ್ರವನ್ನು ಹಾರಲು ಸಾದ್ಯವಾಯಿತು.. ಹಾಗೆಯೇ ಜೀವನದ ಪ್ರತಿಯೊಂದು ಮುಖ್ಯ ಘಟ್ಟಗಳಲ್ಲಿ ಈ ತರಹದ ಸಮಸ್ಯೆಗಳು ಎದುರಾಗುತ್ತವೆ, ಆದರೆ ಧೈರ್ಯಶಾಲಿಯಾಗಿ ಅದನ್ನು ಎದುರಿಸಬೇಕು.

ನಮಗೊಂದು ಸಂಸ್ಕೃತ ಸುಭಾಷಿತ ಇತ್ತು. ಅದು ಇವತ್ತಿಗೂ ನೆನಪಿದೆ. "ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈಃ | ಪ್ರಯಭ್ಯ ವಿಘ್ನ ವಿಹಿತಾಃ ವಿರಮಂತಿ ಮಧ್ಯಾಃ | ವಿಘ್ನೇನ ಪುನಃ ಪುನರಪಿ ಪ್ರತಿಹನ್ಯ ಮಾನಾಃ | ಪ್ರಾರಾಭ್ದಮುತ್ತಮ ಜನಾಃ ನ ಪರಿತ್ಯಜಂತಿ ||" ಅಂತ. ಅಂದರೆ ನೀಚರು ಅಯ್ಯೋ ವಿಘ್ನಗಳು ಬರುತ್ತೆ ಅಂತ ಪ್ರಾರಂಭವೇ ಮಾಡೋದಿಲ್ಲ! ಪ್ರಾರಂಭ ಮಾಡಿ ವಿಘ್ನಗಳು ಬಂದಮೇಲೆ ಮದ್ಯಮರು ಅದನ್ನು ಬಿಟ್ಟು ಬಿಡುತ್ತಾರೆ, ಆದರೆ ಉತ್ತಮರು ಹಿಡಿದ ಕೆಲಸವನ್ನು ಎಷ್ಟೇ ಕಷ್ಟಗಳು ಬಂದರೂ ಬಿಡುವುದಿಲ್ಲ ಅಂತ.

ಮತ್ತೆ ಒಮ್ಮೆ ನೀವು Negetive Feelings ನ ದಾಸರಾದರೋ, ಆಮೇಲೆ ಮುಗೀತು ! ಮತ್ತೆ ಒಂದರ ಮೇಲೊಂದು ವಿಚಾರಧಾರೆಗಳು ಬರುತ್ತಾ ಹೋಗುತ್ತದೆ... ಎಲ್ಲವೂ ಸರಿ ಎನಿಸುತ್ತದೆ. ಅಂದರೆ ನೀವು ಮಾಯೆಗೆ ಸಂಪೂರ್ಣ ಬಲಿಯಾಗಿದ್ದೀರಿ ಎಂದರ್ಥ. ಅದಕ್ಕೇ ಅರ್ಜುನ ಅಷ್ಟೊತ್ತು ಬ್ಲೇಡ್ ಹಾಕಿದ್ದು !!! ಒಂದೂ ವಿವೇಚನೆಯ ಮಾತಿಲ್ಲ.. ಎಲ್ಲರ ಸ್ಥಿತಿನೂ ಹಾಗೆ ಬಿಡಿ. ಪಾಪ ಅವನಿಗೇಕೆ ಬಯ್ಯುವುದು.

ಇಲ್ಲಿ ಇನ್ನೊದು ವಿಚಾರ, ಅರ್ಜುನ ಅಂತ ಬಂದಾಗಲೆಲ್ಲ ಕೃಷ್ಣ ನಿಮಗೇ ಹೇಳುತ್ತಿದ್ದಾನೆ ಎಂದು ತಿಳಿಯಬೇಕು. ಆಗ ಗೀತೆ ನಿಮ್ಮ ಜೊತೆ ಮಾತಾಡುತ್ತದೆ, ಯಾರೋ ಯಾರಿಗೋ ಹೇಳಿದರು ಅಂತ ಯೋಚನೆ ಮಾಡಿದ್ರೆ ನಿಮಗೇನೂ ಸಿಗುವುದಿಲ್ಲ ! ಸದ್ಯಕ್ಕೆ ಇಷ್ಟು ಸಾಕು ಅಲ್ವಾ ಇಲ್ಲದಿದ್ರೆ ಆಮೇಲೆ ನಮಗೂ ವಿಷಾದ ಆಗೋಕೆ ಶುರುವಾಗುತ್ತೆ :)


2 comments:

  1. " ಏನೆಂದರೆ ವಿಷಾದವು ಯೋಗ ಹೇಗೆ ಆಗುತ್ತದೆ ?!! ಅಂತ ಯಾರಾದರೂ ತಿಳಿದವರು ಸಮಂಜಸವಾದ ಉತ್ತರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ" !!!!
    ==== http://www.youtube.com/watch?v=1Et_FziAXPI ನೋಡಿರಿ / ಕೇಳಿರಿ . ಇಲ್ಲಿ ವಿಷಾದವೂ ಇದೆ , ಅದೇ ಯೋಗ ಎಂಬ ಭಾವವೂ ಇದೆ!

    ReplyDelete